ಜಿಲ್ಲೆ

ಮೈಸೂರು ನಗರದಲ್ಲಿ ಸಂಜೆವರೆಗೂ ಜಿಟಿ ಜಿಟಿ ಮಳೆ

ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಬುಧವಾರ ಜಿಲ್ಲೆಯ ಬಹುತೇಕ ಕಡೆ ಮಳೆಯಾಗಿದೆ. ಮೈಸೂರು ನಗರದಲ್ಲೂ ಸಂಜೆವರೆಗೂ ಜಿಟಿ ಜಿಟಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು.
ಬೆಳಗ್ಗೆ 6 ಗಂಟೆಯಿಂದಲೇ ಸೋನೆಯೊಂದಿಗೆ ಆರಂಭವಾದ ಮಳೆ, ನಂತರ ಕೊಂಚ ಜೋರಾಯಿತು. ಮಧ್ಯಾಹ್ನ 12 ಗಂಟೆವರೆಗೂ ಸುರಿತು. ಬಳಿಕ ಕೊಂಚ ಬಿಡುವಿನ ನಂತರ ಶುರುವಾದ ಜಿಟಿಜಿಟಿ ಮಳೆ ಆಗೊಮ್ಮೆ, ಈಗೊಮ್ಮೆ ಜೋರಾಗಿ ಸುರಿಯಿತು. ಸಾರ್ವಜನಿಕರು ಒಂದೆಡೆಯಿಂದ ಮತ್ತೊಂದೆಡೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಸಾಕಷ್ಟು ಜನ ಅಂಗಡಿ-ಮುಂಗಟ್ಟುಗಳಲ್ಲಿ ಆಶ್ರಯ ಪಡೆದು, ಮಳೆ ನಿಂತ ನಂತರ ತೆರಳಿದರು.
ರಸ್ತೆ ಬದಿ ವ್ಯಾಪಾರಿಗಳು ತೊಂದರೆ ಅನುಭವಿಸಿದರು. ಮಳೆಯಿಂದ ಮೈಸೂರು ಮಲೆನಾಡಿನಂತೆ ಗೋಚರವಾಯಿತು. ತಂಪುಗಾಳಿ ಬೀಸಿತು. ಇದರಿಂದ ಮನೆ ಮೂಲೆ ಸೇರಿದ್ದ ಸ್ವೆಟರ್, ಜರ್ಕಿನ್, ಕೈಗವಸುಗಳನ್ನು ಹೊರತೆಗೆದು ಧರಿಸಿಕೊಂಡ ಜನರು, ಚಳಿಯಿಂದ ರಕ್ಷಿಸಿಕೊಂಡು ಬೆಚ್ಚಗಾದರು.