ಜಿಲ್ಲೆ

ಮೈಸೂರಿನಲ್ಲಿ ಧಾರಾಕಾರ ಮಳೆ

ಸದೇಶ್ ಕಾರ್ಮಾಡ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ ಬೆಳಗ್ಗೆ ದಟ್ಟವಾದ ಮೋಡ ಕವಿದು ಧಾರಾಕಾರ ಮಳೆ ಸುರಿಯಿತು. ದಿಢೀರಾಗಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.

ರಾಜ್ಯದ ವಿವಿಧೆಡೆ ಅ.15ರವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅಲ್ಲದೆ, ಮೈಸೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿತ್ತು. ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ನಗರದಲ್ಲಿ ಭಾರಿ ಮಳೆ ಸುರಿಯಿತು.

ನಗರದಲ್ಲಿ ಬೆಳಗ್ಗೆ 5.30 ರಿಂದ ಧಾರಾಕಾರ ಮಳೆ ಸುರಿಯಲು ಪ್ರಾರಂಭಿಸಿ ಬೆಳಗ್ಗೆ 8ರವರೆಗೆ ಅಬ್ಬರಿಸಿತು. ಭಾರಿ ಮಳೆಯಿಂದ ನಗರದ ತಗ್ಗು ಪ್ರದೇಶದಲ್ಲಿರುವ ಹಲವು ರಸ್ತೆಗಳಲ್ಲಿ ಮಳೆ ನೀರು ನದಿಯ ರೂಪದಲ್ಲಿ ಹರಿಯಿತು. ಬೆಳಗ್ಗಿನ ಜಾವ ಸುರಿದ ಮಳೆಯಿಂದ ಮಳೆಯು ಜನರ ಮೇಲೆ ಹೆಚ್ಚು ಪರಿಣಾಮ ಬೀರಲಿಲ್ಲ. ಆದರೆ, ನಗರದಿಂದ ಹೊರ ಜಿಲ್ಲೆಗಳಿಗೆ ಕೆಲಸ ಕಾರ್ಯಗಳಿಗೆ ತೆರಳುವವರು ಮಳೆಯಿಂದ ಸಮಸ್ಯೆ ಎದುರಿಸಿದರು. ಎಡೆಬಿಡದೆ ಸುರಿದ ಮಳೆಯಿಂದ ಬೆಳಗ್ಗಿನ ಜಾವ ವಾಯು ವಿಹಾರಕ್ಕೆ ತೆರಳಿದ್ದವರು, ತಳ್ಳುಗಾಡಿಯ ಮೂಲಕ ಮನೆ ಮನೆಗೆ ತರಕಾರಿ, ಹಣ್ಣು ಹಂಪಲು ಮಾರಾಟಕ್ಕೆ ತೆರಳಿದ್ದವರು ಸಮಸ್ಯೆಗೆ ಸಿಲುಕಿದರು.

ರಸ್ತೆಯಲ್ಲಿ ಹರಿದ ನೀರು: ಸುಭಾಷ್‌ನಗರ 3ನೇ ಮುಖ್ಯರಸ್ತೆಯ ಕ್ವೆಸ್ಟ್ ಅಕಾಡೆಮಿ ಹಿಂಭಾಗದ ರಸ್ತೆಯಲ್ಲಿ ಬೆಳಗ್ಗೆ ಸುರಿದ ಧಾರಾಕಾರ ಮಳೆಯ ಪರಿಣಾಮ ಮೋರಿ ಮೇಲೆ ಆರ್‌ಸಿಸಿ ಕಾಂಕ್ರೀಟ್ ಅಳವಡಿಸಲು ಇಟ್ಟಿದ್ದ ತಾತ್ಕಾಲಿಕ ಸೆಂಟ್ರಿಂಗ್‌ಗೆ ಭಾರಿ ಪ್ರಮಾಣದಲ್ಲಿ ಕಸದ ರಾಶಿ ಸಿಲುಕಿಕೊಂಡು ಮೋರಿಕಟ್ಟಿಕೊಂಡು ನೀರು ರಸ್ತೆಯಲ್ಲಿ ಉಕ್ಕಿ ಹರಿಯಲು ಪ್ರಾರಂಭಿಸಿತು.

ಮೋರಿ ಕಟ್ಟಿಕೊಂಡು ರಸ್ತೆಯ ಮೇಲೆಲ್ಲ ಎರಡು ಅಡಿ ಎತ್ತರಕ್ಕೆ ನೀರು ನುಗ್ಗಿ ಸಾರ್ವಜನಿಕರ ಮನೆಗಳಿಗೆ ಅಪಾರವಾದ ನಷ್ಟ ಸಂಭವಿಸಿದ್ದು,ಸಾರ್ವಜನಿಕರು ಹೈರಾಣಾದರು. ನಗರ ಪಾಲಿಕೆಯಿಂದ 5 ಕೋಟಿ ರೂ. ಮೊತ್ತದ ಟೆಂಡರ್ ಪಡೆದು ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರರು ಜನರಿಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.