ಮಂಗಳೂರು: ಮಂಗಳೂರು ನಗರ ಸೇರಿದಂತೆ ಹೊರವಲಯದಲ್ಲಿ ಸೋಮವಾರ ಬಿರುಸಿನ ಮಳೆಯಾಗಿದೆ. ಬೆಳಗ್ಗೆ ಆರಂಭವಾದ ಮಳೆ ಒಮ್ಮೊಮ್ಮೆ ಕೆಲಹೊತ್ತು ಬಿಡುವು ನೀಡುತ್ತಾ ನಿರಂತರವಾಗಿ ಸುರಿದಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಹುತೇಕರು ಮನೆಯಲ್ಲೇ ಇರುವುದರಿಂದ ಜನ ಸಾಮಾನ್ಯರಿಗೆ ಹೆಚ್ಚಿನ ಸಮಸ್ಯೆಯಾಗಿಲ್ಲ. ಆದರೆ ತುರ್ತು ಅವಶ್ಯಕತೆ ಇರುವವರಿಗೆ ಓಡಾಡಲು ಮಳೆ ಅಡ್ಡಿಯಾಗಿದೆ. ಎಂದಿನಂತೆ ನಗರದ ವಿವಿಧೆಡೆ ರಸ್ತೆಯಲ್ಲೇ ನೀರು ಹರಿದಿದೆ. ಗಣಪತಿ ಹೈಸ್ಕೂಲ್ ರಸ್ತೆ, ರಥಬೀದಿ, ಅಂಬೇಡ್ಕರ್ ವೃತ್ತ, ಕಂಕನಾಡಿ ಮೊದಲಾದೆಡೆಗಳಲ್ಲಿ ರಸ್ತೆಯೇ ಕಾಲುವೆಯಂತಾಗಿತ್ತು. ಬದಿಯಲ್ಲಿದ್ದ ಕಲ್ಲು, ಮಣ್ಣು,ಕಸ ರಸ್ತೆಗೆ ಬಂದು ಬಿದ್ದಿದೆ. ವಾಹನ ಸಂಚಾರ ಕಡಿಮೆ ಇದ್ದುದರಿಂದ ತೊಂದರೆಯಾಗಿಲ್ಲ.
ನಗರದ ವಿವಿಧ ರಾಜಕಾಲುವೆಗಳಲ್ಲೂ ನೀರಿನ ಹರಿವು ಹೆಚ್ಚಾಗಿದ್ದು, ಆಸುಪಾಸಿನ ಮನೆಗಳವರು ಆತಂಕಕ್ಕೆ ಒಳಗಾಗಿದ್ದಾರೆ. ಅಬ್ಬರದ ಮಳೆ ಸುರಿದು ಸ್ವಲ್ಪ ಬಿಡುವು ನೀಡುವುದರಿಂದ ನೀರು ಏರಿಕೆಯಾಗಿ ಇಳಿದು ಹೋಗಿದೆ. ತಗ್ಗು ಪ್ರದೇಶಗಳಾದ ಕುದ್ರೋಳಿ, ಕೊಡಿಯಾಲ್‌ಬೈಲ್, ಕೊಡಿಯಾಲ್ ಗುತ್ತು , ಕೊಟ್ಟಾರ ಚೌಕಿ, ಮಾಲೆಮಾರ್, ಜಪ್ಪಿನಮೊಗರು ಮೊದಲಾದೆಡೆ ಮಳೆ ಆತಂಕ ತಂದಿದೆ. ಮಳೆಗೆ ಅಬ್ಬರದ ಗಾಳಿಯೂ ಜತೆಯಾಗಿದೆ. ಕೆಲವೆಡೆ ವಿದ್ಯುತ್ ಕೂಡಾ ವ್ಯತ್ಯಯವಾಗಿದೆ.
ಮ್ಯಾನ್‌ಹೋಲ್‌ನಿಂದ ನೀರು: ಒಳಚರಂಡಿ ಜಾಲಕ್ಕೆ ಮಳೆ ನೀರನ್ನು ಸಂಪರ್ಕಿಸಿದ ಪರಿಣಾಮ ಗುಜ್ಜರಕೆರೆ ಬಳಿ ಮ್ಯಾನ್ ಹೋಲ್‌ನಿಂದ ನೀರು ಹೊರಕ್ಕೆ ಹರಿದಿದೆ. ನೀರು ಹೊರಕ್ಕೆ ಬರುವ ರಭಸಕ್ಕೆ ಅತ್ಯಂತ ಭಾರವಾಗಿರುವ ಮ್ಯಾನ್‌ಹೋಲ್ ಮುಚ್ಚಳವೂ ನೀರಿನಲ್ಲಿ ಮೇಲೆ ಕೆಳಗೆ ತೇಲುತಿತ್ತು. ಇದರಿಂದ ಹೊರ ಬಂದ ನೀರು ಅಕ್ಕ-ಪಕ್ಕದ ಮನೆಗಳ ಅಂಗಳಕ್ಕೆ ಹರಿದಿದೆ. ಇತ್ತೀಚೆಗೆ ಇಲ್ಲಿನ ಒಳಚರಂಡಿ ಜಾಲವನ್ನು ದುರಸ್ತಿ ಮಾಡಲಾಗಿತ್ತು. ಮಳೆ ನೀರನ್ನು ಒಳಚರಂಡಿಗೆ ಸಂಪರ್ಕಿಸದಂತೆ ಸಾರ್ವಜನಿಕರಲ್ಲಿ ಹಲವು ಬಾರಿ ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಗಾಲದಲ್ಲಿ ನಗರದ ಹಲವೆಡೆ ಮ್ಯಾನ್‌ಹೋಲ್‌ಗಳಿಂದ ನೀರು ಹೊರಕ್ಕೆ ಬರವುದು ಸಾಮಾನ್ಯವಾಗಿದೆ.
ಆವರಣ ಗೋಡೆ ಕುಸಿತ: ನಗರದ ಬೋಳೂರಿನ ರುದ್ರಭೂಮಿಯ ಒಂದು ಭಾಗದ ಆವರಣಗೋಡೆ ಮಳೆಗೆ ಜರಿದಿದೆ. ಮುಖ್ಯರಸ್ತೆಗೆ ಇದರ ಕಲ್ಲುಗಳು ಬಿದ್ದುದ್ದು, ತಕ್ಷಣ ಸ್ಥಳೀಯ ಕಾರ್ಪೋರೇಟರ್ ಜಗದೀಶ್ ಶೆಟ್ಟಿ ಭೇಟಿ ನೀಡಿ, ತಾವೇ ಖುದ್ದಾಗಿ ತೆರವು ಕಾರ್ಯ ನಡೆಸಿದ್ದು, ಸ್ಥಳೀಯರೂ ಕೈಜೋಡಿಸಿದರು.