ಕುಂಬಳೆ: ಧಾರಾಕಾರ ಮಳೆಯಿಂದಾಗಿ ಭೂಕುಸಿತ ಭೀತಿ ಎದುರಿಸುತ್ತಿರುವ ಪನತ್ತಡಿ ಪಂಚಾಯಿತಿ ಕಲ್ಲಪಳ್ಳಿ ಕಮ್ಮಾಡಿ ಪತ್ತುಕುಡಿಯಲ್ಲಿ ಪಂಚಾಯಿತಿ ಮತ್ತು ಕಂದಾಯ ಇಲಾಖೆ ನೆರವಿನೊಂದಿಗೆ 20 ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸ್ಥಳಾಂತರಗೊಳಿಸಿದ ಕುಟುಂಬಗಳನ್ನು ಕಮ್ಮಾಡಿ ಎಂಜಿಎಲ್ ಮತ್ತು ವಿವಿಧ ಮನೆಗಳಲ್ಲಿ ಸಿದ್ಧಪಡಿಸಲಾದ ಸಂತ್ರಸ್ತ ಶಿಬಿರಗಳಲ್ಲಿ ವಾಸ ಸೌಕರ್ಯ ಏರ್ಪಡಿಸಲಾಗಿದೆ.
ಪತ್ತುಕುಡಿಯ ನಾರಾಯಣನ್ ಮನೆ ಗುಡ್ಡೆ ಕುಸಿತದಿಂದ ಹಾನಿಗೀಡಾಗಿದೆ. ಚುಳ್ಳಿಕೆರೆಯಲ್ಲೂ ಭೂಕುಸಿತದ ಭೀತಿ ಉಂಟಾಗಿದ್ದು, ಒಟ್ಟಕಂಡಿ ಮತ್ತು ಕುಟ್ಟಾನ ಕಾಲನಿಗಳ 20 ಕುಟುಂಬ ಚುಳ್ಳಿಕೆರೆ ಸರ್ಕಾರಿ ಎಲ್‌ಪಿ ಶಾಲೆಯಲ್ಲಿ ಏರ್ಪಡಿಸಲಾಗಿರುವ ಸಂರಕ್ಷಣಾ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಇವರಲ್ಲೊಬ್ಬರನ್ನು ಪೂಡಂಗಲ್ಲು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಪನತ್ತಡಿ ಕಮ್ಮಾಡಿ ಹೊಳೆಯಲ್ಲಿ ಮಳೆ ನೀರು ತುಂಬಿ ಪ್ರವಾಹದ ಭೀತಿ ಹಿನ್ನೆಲೆಯಲ್ಲಿ 22 ಮಂದಿಯನ್ನೊಳಗೊಂಡ 8 ಕುಟುಂಬ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ತೃಕ್ಕರಿಪುರ ಮಯ್ಯಿಚ್ಚ ಹೊಳೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಕಡಲ್ಕೊರೆತ ಭೀತಿ: ಕಾಸರಗೋಡು, ಚೆರ್ಕಳದಿಂದ ಚಟ್ಟಂಚಾಲ್ ತನಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡೆ ಕುಸಿತ ಭೀತಿ ಉಂಟಾಗಿದ್ದು, ರಸ್ತೆಯಲ್ಲಿ ಆಗಸ್ಟ್ 7ರ ತನಕ ವಾಹನ ಸಂಚಾರಕ್ಕೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ. ಮಧೂರು ಮಧುವಾಹಿನಿ ಹೊಳೆಯಲ್ಲೂ ಪ್ರವಾಹ ಭೀತಿ ಎದುರಾಗಿದೆ. ಉಪ್ಪಳ, ಚೇರಂಗೈ, ತೃಕ್ಕರಿಪುರ ಮೊದಲಾದೆಡೆಗಳಲ್ಲಿ ಕಡಲ್ಕೊರೆತ ಭೀತಿ ಎದುರಾಗಿದೆ. ಈಗಾಗಲೇ ಈ ಪ್ರದೇಶದಲ್ಲಿ ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಕೆಲವು ಮನೆ ಸಮುದ್ರ ಪಾಲಾಗುವ ಸ್ಥಿತಿಯಲ್ಲಿದೆ. ಮಂಜೇಶ್ವರದಲ್ಲಿ ಕಡಲ್ಕೊರೆತ ತಲೆದೋರಿದ್ದು, ಇದರಿಂದಾಗಿ ಸಮುದ್ರ ದಡದಿಂದ 30 ಮೀಟರ್ ತನಕ ನೀರು ನುಗ್ಗಿದೆ. ಹಲವು ಮರಗಳು ರಸ್ತೆಗೆ ಬಿದ್ದಿವೆ. ವಲಿಯಪರಂಬ ಪಡನ್ನಕ್ಕಾಡ್‌ನಲ್ಲಿ ಕಡಲ್ಕೊರೆತ ಭೀತಿ ಉಂಟಾಗಿದೆ.
ಇಲಾಖೆ ಮುನ್ನೆಚ್ಚರಿಕೆ: ಆಗಸ್ಟ್ 3ರ ತನಕ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಅಲರ್ಟ್ ಘೋಷಿಸಿದೆ. ವಿದ್ಯುತ್ ಅವಘಡ ಉಂಟಾದಲ್ಲಿ 9496011431 ಮಾಹಿತಿ ನೀಡಲು ತಿಳಿಸಲಾಗಿದೆ.
ಉಪ್ಪಳ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಕೃಷಿ ನಾಶಗೊಳ್ಳುವ ಸಾಧ್ಯತೆಯಿದೆ. ಪೈವಳಿಕೆ, ಮೀಂಜ, ಮಂಗಲ್ಪಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ತುಂಬಿ ಅಡಕೆ ತೋಟ ಜಲಾವೃತಗೊಂಡಿದೆ. ಪೈವಳಿಕೆ ಪಂಚಾಯಿತಿಯ ಮುನ್ನಿಪ್ಪಾಡಿ ಹಾಗೂ ಮಂಗಲ್ಪಾಡಿ ಪಂಚಾಯಿತಿ ದೇರಂಬಳ, ಮಡಂದೂರು ಸಹಿತ ವಿವಿಧ ಪ್ರದೇಶಗಳಲ್ಲಿ ತೋಟ ಜಲಾವೃತಗೊಂಡಿದೆ. ಶಿರಿಯ ಹೊಳೆ ಉಕ್ಕಿ ಹರಿಯುತ್ತಿದ್ದು ಉಳುವಾರು, ಬಂಬ್ರಾಣ ಬಯಲು ಪ್ರದೇಶದಲ್ಲಿ ನೀರು ತುಂಬಿಕೊಂಡಿದೆ. ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಕುಂಬಳೆ ಬದ್ರಿಯಾ ನಗರದಲ್ಲಿ ಮರ ಬಿದ್ದು ಆಮಿನ ಅವರ ಮನೆ ಹಾನಿಗೀಡಾಗಿದೆ.