ಜಿಲ್ಲೆ

ಕೊಡಗಿನಲ್ಲಿ ಬಿರುಸುಗೊಂಡ ಮಳೆ

ಸುನಿಲ್ ಪೊನ್ನೇಟಿ

ಮಡಿಕೇರಿ

ಕೊಡಗಿನಲ್ಲಿ ಆರಿದ್ರಾ ಮಳೆ ಬಿರುಸು ಪಡೆದುಕೊಂಡಿದೆ. ಜಿಲ್ಲೆಯಾದ್ಯಂತ ವರುಣನ ಆರ್ಭಟ ಚುರುಕಾಗಿದ್ದು, ಈ ಬಾರಿಯ ಮಳೆಗಾಲ ನಿರೀಕ್ಷೆ ಮೂಡಿಸಿದೆ. ಭಾಗಮಂಡಲದಲ್ಲಿ ಮಂಗಳವಾರ ರಾತ್ರಿಯಿಂದ ಈಚೆಗೆ ಜೋರಾದ ಮಳೆ ಬರುತ್ತಿದೆ.  ಹೆಚ್ಚಾಗಿ  ಮಳೆ ಸುರಿದ ಕಾರಣ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ತ್ರಿವೇಣಿ ಸಂಗಮ ಬಹುತೇಕ ಭರ್ತಿ ಆಗಿದೆ. ಮಳೆ ಹೀಗೆಯೇ ಮುಂದುವರಿದರೆ ನಾಪೋಕ್ಲು‌ ರಸ್ತೆ‌ ಮೇಲೆ ನದಿ‌ ನೀರು ಬರಲಿದೆ.

ಮಳೆ ತೀವ್ರತೆ ಪಡೆದುಕೊಳ್ಳುತ್ತಿರುವುದರಿಂದ ಜೂ.28 ರ ಬೆಳಿಗ್ಗೆ 8.30 ಗಂಟೆಯವರೆಗೆ ಆರೆಂಜ್ ‌ ಅಲರ್ಟ್ ಘೋಷಿಸಲಾಗಿದೆ.

ಭಾಗಮಂಡಲ -ತಲಕಾವೇರಿ ರಸ್ತೆಯಲ್ಲಿ ಮರ ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ನಂತರ ಮರ ತೆರವುಗೊಳಿಸಲಾಗಿದೆ. ಮಡಿಕೇರಿ ನಗರ ವ್ಯಾಪ್ತಿಯಲ್ಲೂ ಮಳೆಯಾಗುತ್ತಿದ್ದು, ಮಂಜು ಮತ್ತು ಚಳಿಯ ವಾತಾವರಣ ಕಂಡುಬಂದಿದೆ. ನೀರುಕೊಲ್ಲಿ- ಚೆಟ್ಟಳ್ಳಿ ರಸ್ತೆಯಲ್ಲಿ ಮರ ಬಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.  

ಸಿದ್ದಾಪುರ ಭಾಗದಲ್ಲಿ ಮಳೆ ಚುರುಕುಗೊಂಡಿದೆ. ವಿರಾಜಪೇಟೆ ವ್ಯಾಪ್ತಿಯಲ್ಲೂ ಮಳೆಯ ಪ್ರಮಾಣ ಹೆಚ್ಚಾಗಿದ್ದು, ನದಿ ತೀರದ ಪ್ರದೇಶಗಳಲ್ಲಿ ಆತಂಕ‌ ಕಾಣಿಸಿಕೊಂಡಿದೆ. ಸೋಮವಾರಪೇಟೆ, ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಭಾಗದಲ್ಲೂ ಮಳೆ ಬಿರುಸುಗೊಂಡಿದೆ. ಗೋಣಿಕೊಪ್ಪದಲ್ಲಿ ಕಳೆದ 24 ಗಂಟೆಯಲ್ಲಿ ಸುಮಾರು 3 ಇಂಚು ಮಳೆಯಾಗಿದ್ದು. ಕೀರೆ ಹೊಳೆ ತುಂಬಿ ಹರಿಯುತ್ತಿದೆ. ಸುಂಟಿಕೊಪ್ಪ ವ್ಯಾಪ್ತಿಯಲ್ಲೂ ಬಿರುಸಾದ ಮಳೆ ಬರುತ್ತಿದೆ. ಕರಿಕೆ ಭಾಗದಲ್ಲೂ ಉತ್ತಮ ಮಳೆಯಾಗುತ್ತಿದೆ.

ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ 62.63 ಮಿ.ಮೀ. ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 4.36 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ  644.45 ಮಿ.ಮೀ. ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 234.62 ಮಿ.ಮೀ ಮಳೆಯಾಗಿತ್ತು.                             

 ಮಡಿಕೇರಿ ತಾಲ್ಲೂಕಿನಲ್ಲಿ 90.13 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ  85.20 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ  72.30 ಮಿ.ಮೀ.,  ಸೋಮವಾರಪೇಟೆ ತಾಲೂಕಿನಲ್ಲಿ ಇಂದಿನ 44.80 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 20.70 ಮಿ.ಮೀ. ಸರಾಸರಿ ಮಳೆಯಾಗಿದೆ. 

ಮಡಿಕೇರಿ ಕಸಬಾ 56.20, ನಾಪೋಕ್ಲು 85.20, ಸಂಪಾಜೆ 73.50, ಭಾಗಮಂಡಲ 145.60, ವಿರಾಜಪೇಟೆ 89.40, ಅಮ್ಮತ್ತಿ 81, ಹುದಿಕೇರಿ 66, ಶ್ರೀಮಂಗಲ 65, ಪೊನ್ನಂಪೇಟೆ 83.02, ಬಾಳೆಲೆ 75.16, ಸೋಮವಾರಪೇಟೆ ಕಸಬಾ 43.40, ಶನಿವಾರಸಂತೆ 28, ಶಾಂತಳ್ಳಿ 85, ಕೊಡ್ಲಿಪೇಟೆ 22.80, ಕುಶಾಲನಗರ 10.40 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 31 ಮಿ.ಮೀ.ಮಳೆಯಾಗಿದೆ.