ಜಿಲ್ಲೆ

ಕಾರವಾರಕ್ಕೆ ಜಲ ಕಂಠಕ

Uttara Kannada - Subash Hegde

ಕಾರವಾರ: ಮಿತಿ ಮೀರಿ ಸುರಿದ ಮಹಾ ಮಳೆಗೆ ಕಾರವಾರ ಜಲಾಶಯವಾಗಿದೆ. ನಗರದ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಚರಂಡಿಯ ನೀರು ಉಕ್ಕಿ ರಸ್ತೆಗಳಲ್ಲಿ ಹರಿಯಿತು.

ಬುಧವಾರ ಸಾಯಂಕಾಲ ಶುರುವಾದ ಮಳೆ ಬಿಡುವೇ ನೀಡದೇ ಸುರಿದ ಪರಿಣಾಮ ನಗರದ ಚರಂಡಿಗಳು ಉಕ್ಕಿ ಹರಿದವು. ರಾತ್ರಿ ವಿದ್ಯುತ್ ಸಂಪೂರ್ಣ ಸ್ಥಗಿತ ಮಾಡಲಾಗಿತ್ತು. ಮಳೆಯ ನೀರು ರಾತ್ರಿಯೇ ಮನೆಗಳಿಗೆ ನುಗ್ಗಿತ್ತು.

ನಗರದ ಹೈಚರ್ಚ್, ದೋಭಿಘಾಟ್ ರಸ್ತೆ, ಗೀತಾಂಜಲಿ ಟಾಕೀಸ್ ಎದುರು,ಪಿಡಬ್ಲುಡಿ ಕ್ವಾಟ್ರಸ್,ಮುರಳೀಧರ ಮಠ ರಸ್ತೆ, ಎಂಜಿ ಎಸ್ತೆಯಲ್ಲಿ ಜಿಲ್ಲಾ ನೋಂದಣಿ ಕಚೇರಿಯ ಎದುರು, ಹಬ್ಬುವಾಡ, ಬಾಂಡಿಶಿಟ್ಟಾ ಎಪಿಎಂಸಿ ಎದುರಿನ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರ ಆಗಾಗ ಸ್ಥಗಿತವಾಗಿತ್ತು. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅರಗಾ ಬಳಿ ನೀರು ನಿಂತು ಗುರುವಾರ ಬೆಳಗಿನಜಾವ ಕೆಲವು ವಾಹನಗಳು ನಿಂತುಕೊAಡಿದ್ದವು.

ಕಾರವಾರದ ಹೈಚರ್ಚ್, ಕೆಇಬಿ ರಸ್ತೆ, ಬೈತಖೋಲ್, ಪದ್ಮನಾಭ ನಗರ, ಕೆಎಚ್‌ಬಿ ಸೇರಿ ವಿವಿಧ ಪ್ರದೇಶಗಳ 50 ಕ್ಕೂ ಅಧಿಕ ಮನೆಗಳಿಗೆ ರಾಡಿ ನೀರು ನುಗ್ಗಿ ಇಲೆಕ್ಟ್ರಾನಿಕ್ಸ್‌ ಸಾಮಗ್ರಿಗಳಿಗೆ ಹಾನಿಯಾಗಿದೆ. ಮನೆಯ ಸೋಫಾ, ಬೆಡ್‌ಗಳು, ಆಹಾರ ಸಾಮಗ್ರಿಗಳು ಬಳಕೆಗೆ ಬಾರದಂತಾಗಿದೆ. ಹೈಚರ್ಚ್ ಹಾಗೂ ಅಕ್ಕಪಕ್ಕದ ಎಲ್ಲ ಲಿಂಕ್ ರಸ್ತೆಗಳಲ್ಲಿ ನೀರು ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ವ್ಯಾಪಾರಿ ಸಾಮಗ್ರಿಗಳು ಬಳಕೆಗೆ ಬಾರದಂತಾಗಿವೆ.ಅವುಗಳನ್ನು ವ್ಯಾಪಾರಸ್ಥರು ದನಗಳಿಗೆ ಚೆಲ್ಲಿದ ದೃಶ್ಯ ಕಂಡುಬಂತು. ಇದೇ ರಸ್ತೆಗಳಲ್ಲಿರುವ ಅಪಾರ್ಟ್ಮೆಂಟ್‌ಗಳ ನೆಲದಡಿಯ ಪಾರ್ಕಿಂಗ್ ಜಾಗದಡಿ ನೀರು ನಿಂತು 20 ಕ್ಕೂ ಅಧಿಕ ಕಾರುಗಳಿಗೆ ಹಾನಿಯಾಗಿದೆ.

ನಗರದ ಎನ್‌ಡಬ್ಲುಕೆಆರ್‌ಟಿಸಿ ಡಿಪೋದಲ್ಲಿ ನೀರು ನಿಂತು ದೊಡ್ಡ ಸರೋವರದಂತೆ ಭಾಸವಾಗುತ್ತಿತ್ತು. ಹಬ್ಬುವಾಡದ ಪಿಎಂಜಿಎಸ್‌ವೈ ಕಚೇರಿಗೆ ನೀರು ನುಗ್ಗಿ ಕಡತಗಳಿಗೆ ಹಾನಿಯಾದವು. ಬೈತಖೋಲ್‌ನಲ್ಲಿ ಎರಡು ಮನೆಗಳ ಗೋಡೆ ಕುಸಿದು ನಷ್ಟ ಉಂಟಾಯಿತು. ನಗರದ ಹಿಂದು ಹೈಸ್ಕೂಲ್, ಬಿಇಒ ಕಚೇರಿ, ಬಾಯಿ ಕುವರಬಾಯಿ ಶಾಲೆ ಆವರಣಗಳು ನೀರಿನಿಂದ ಆವೃತವಾಗಿದ್ದವು.

ಆಸ್ಪತ್ರೆಯ ವಾರ್ಡ್ಗೂ ತುಂಬಿದ ನೀರು

ಕಾರವಾರ ಕ್ರಿಮ್ಸ್ ಆಸ್ಪತ್ರೆಯ ಮಹಿಳಾ ವಾರ್ಡ್ಗೆ ನೀರು ತುಂಬಿ ರೋಗಿಗಳು ಪಡಬಾರದ ತೊಂದರೆ ಅನುಭವಿಸಿದರು. ಬೆಡ್‌ಗಳ ಕೆಳಗೆ ಅರ್ಧ ಅಡಿ ನೀರು ನಿಂತಿತ್ತು. ಪಂಪ್ ಅಳವಡಿಸಿ, ನೀರು ಹೊರ ಹಾಕಲಾಯಿತು.

ಅತಿ ಹೆಚ್ಚು ಮಳೆ ಬಿದ್ದ ಪ್ರದೇಶಗಳು

(ಗುರುವಾರ ಬೆಳಗಿನಂತೆ ವರದಿ-ಹಿಂದಿನ 24 ಗಂಟೆಗಳ ವರದಿ)

ಕಾರವಾರ ವೈಲವಾಡ-266.5 ಮಿಮೀ, ಶಿರವಾಡ-261, ಕಡವಾಡ-249, ಅಮದಳ್ಳಿ-233, ಅಂಕೋಲಾ ಬೊಬ್ರುವಾಡ 214, ಹಾರವಾಡ-200, ಬೇಲೆಕೇರಿ-199, ಕಾರವಾರ ಮಾಜಾಳಿ-194, ಅಸ್ನೋಟಿ-189, ಅಂಕೊಲಾ ಹನೆಹಳ್ಳಿ-183.5, ಅಂಕೊಲಾ ಬೆಳಂಬಾರ-182.5 ಮಿಮೀ ಮಳೆಯಾಗಿದೆ.

2009 ರ ನೆನಪು

2009 ರ ಅಕ್ಟೋಬರ್ 2 ರಂದು ಮಿತಿ ಮೀರಿ ಮಳೆಯಾಗಿದ್ದರಿಂದ ಕಾರವಾರ ಶಹರ ಸಂಪೂರ್ಣ ಜಲಾವೃತವಾಗಿತ್ತು. ಕಡವಾಡದಲ್ಲಿ ಗುಡ್ಡ ಕುಸಿದಿತ್ತು. ನಂತರದ ವರ್ಷಗಳಲ್ಲಿ ಯಾವುದೋ ಒಂದೊAದು ಪ್ರದೇಶಗಳಲ್ಲಿ ನೀರು ತುಂಬಿದ್ದರೂ ಇಡೀ ನಗರಕ್ಕೆ ನೀರು ತುಂಬಿದ್ದು ಕಡಿಮೆ. ಗುರುವಾರ ನಗರದ ಬಹುತೇಕ ಎಲ್ಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, 2009 ರ ನೆರೆಯ ನೆನಪು ಮರುಕಳಿಸಿತು.

ಗುಡ್ಡ ಕುಸಿದು ಆತಂಕ

ಕಾರವಾರ ಸಾಯಿ ಮಂದಿರ ಪಕ್ಕದ ತಡೆಗೋಡೆ ಕುಸಿದು ಗುಡ್ಡದ ಮೇಲಿನ ಕಲ್ಲುಗಳು ದೇವಸ್ಥಾನದ ಗೋಡೆಗೆ ಬಂದು ಹೊಡೆದಿವೆ. ಎರಡು ವರ್ಷಗಳ ಹಿಂದೆ ಗುಡ್ಡ ಕುಸಿದಿದ್ದು, ಇದೇ ವರ್ಷ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, ಅದೂ ಕುಸಿದು ಹೋಗಿದೆ. ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರವಾರ ಹಬ್ಬುವಾಡ ಸುನೀಲ ಸೋನಿ ಅವರ ಮನೆಯ ಹಿಂದಿನ ಗುಡ್ಡ ಕುಸಿದಿದೆ. ಮನೆಗೆ ಯಾವುದೇ ಅಪಾಯ ಸಂಭವಿಸಿಲ್ಲ. ಅಲಿಗದ್ದಾದಲ್ಲಿ ಗುಡ್ಡದಿಂದ ಹರಿದು ಬಂದ ನೀರು ಮನೆಗಳಿಗೆ ನುಗ್ಗಿದ್ದು, ಕೆಲವುಕಡೆ ಗುಡ್ಡ ಕುಸಿಯುವ ಭೀತಿ ಇದೆ. ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಎಸಿ ಕನಿಷ್ಕ, ತಹಸೀಲ್ದಾರ್ ನಿಶ್ಚಲ ನರೋನಾ ಸ್ಥಳಕ್ಕೆ ಭೇಟಿ ನೀಡಿದರು.

ವಾಹನ ನಿಲುಗಡೆಗೆ ನಿರ್ಬಂಧ

ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂ ಕುಸಿತವಾಗುವ ಸ್ಥಳಗಳಲ್ಲಿ ಎಲ್ಲ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಒಟ್ಟು 19 ಸ್ಥಳಗಳಲ್ಲಿ ಜೂನ್ 12 ರಿಂದ ಮಳೆಗಾಲ ಮುಕ್ತಾಯವಾಗುವವರೆಗೆ ನಿರ್ಭಂಧಿಸಿ, ಜಿಲ್ಲಾಧಿಕಾರಿ  ಆದೇಶಿಸಿದ್ದಾರೆ.

ಈ ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷೇಧ ಬಗ್ಗೆ ಅಗತ್ಯ ಗುರುತಿನ ಚಿಹ್ನೆಯುಳ್ಳ ಸೂಚನಾ ಫಲಕಗಳು ಹಾಗೂ ಇತರೇ ಸುರಕ್ಷಾ ಕ್ರಮಗಳನ್ನು ಅಳವಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಮಳೆ ಮುಂದುವರಿಕೆ

ಜಿಲ್ಲೆಯ ಕರಾವಳಿಯಲ್ಲಿ ಮಾತ್ರ ಭಾರಿ ಮಳೆ ಸುರಿಯುತ್ತಿದೆ. ಮುಖ್ಯವಾಗಿ ಕಾರವಾರ, ಅಂಕೊಲಾ ತಾಲೂಕುಗಳಲ್ಲಿ ಮಿತಿ ಮೀರಿ ಮಳೆಯಾಗಿದೆ. ಘಟ್ಟದ ಮೇಲಿನ ತಾಲೂಕುಗಳಲ್ಲಿ ಮಳೆಯ ಅಬ್ಬರ ಕಂಡುಬಂದಿಲ್ಲ. ಜೂನ್ 18 ರವರೆಗೂ ಜಿಲ್ಲೆಯಲ್ಲಿ ಭಾರಿ ಮಳೆಯಾಗುವುದಾಗಿ ಹವಾಮಾನ ಇಲಾಖೆ ತಿಳಿಸಿದ್ದು, ರೆಡ್ ಅಲರ್ಟ್ ನೀಡಿದೆ.