ಚಿಕ್ಕಮಗಳೂರು ನಗರದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲೇ ಸಂಚಾರ ನಡೆಸುತ್ತಿರುವ ಜನ.  
ಜಿಲ್ಲೆ

ಕಾಫಿನಾಡಿನಲ್ಲಿ ಧಾರಾಕಾರ ಮಳೆ

ಚಿಕ್ಕಮಗಳೂರು: ವಾಯುಭಾರ ಕುಸಿತದ ಎಫೆಕ್ಟ್ ಕಾಫಿನಾಡು ಚಿಕ್ಕಮಗಳೂರಿಗೂ ತಟ್ಟಿದ್ದು, ಮಂಗಳವಾರ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದೆ. ಚಿಕ್ಕಮಗಳೂರು, ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳಲ್ಲಿ ಬೆಳಿಗ್ಗೆಯಿಂದಲೇ ಧಾರಾಕಾರವಾಗಿ ಮಳೆ ಸುರಿದಿದೆ. ಮಧ್ಯಾಹ್ನದ ವೇಳೆಗೆ ಮಳೆಯ ಅರ್ಭಟ ಕಡಿಮೆಯಾಗಿದ್ದು, ನಂತರ ದಟ್ಟವಾದ ಮೋಡ ಕವಿದ ವಾತಾವರಣ ಮುಂದುವರೆದಿದೆ.

ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆ ಬೀಳುತ್ತಿತ್ತು. ಆದರೆ ಮಂಗಳವಾರ ಬೆಳಿಗ್ಗೆಯಿಂದಲೇ ಮಳೆಯ ದರ್ಶನವಾಗಿದ್ದು, ಜನರಿಗೆ ಕಿರಿಕಿರಿ ಎನಿಸಿತು. ತರೀಕೆರೆ ಹಾಗೂ ಕಡೂರು ತಾಲೂಕುಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸಾಧಾರಣ ಮಳೆಯಾಗಿದ್ದರೆ ಚಿಕ್ಕಮಗಳೂರು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ೧೧ ಗಂಟೆಯ ವೇಳೆಗೆ ಧಾರಾಕಾರವಾಗಿ ಮಳೆ ಸುರಿದಿದೆ.
ಕೊಪ್ಪ ಹಾಗೂ ಎನ್.ಆರ್.ಪುರ ಪಟ್ಟಣಗಳಲ್ಲಿ ಮಳೆ ಪ್ರಮಾಣ ಕಡಿಮೆ ಇತ್ತು. ಆದರೆ ಈ ತಾಲೂಕುಗಳ ಗ್ರಾಮೀಣ ಭಾಗದಲ್ಲಿ ಮಳೆ ಧಾರಾಕಾರವಾಗಿ ಸುರಿದಿದೆ. ಧಿಡೀರ್ ಮಳೆ ಹಾಗೂ ದಟ್ಟವಾಗಿ ಮೋಡ ಕವಿದ ವಾತಾವರಣದಿಂದಾಗಿ ಕಾಫಿ, ಅಡಿಕೆ, ಏಲಕ್ಕಿ, ಮೆಣಸು ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.