ಜಿಲ್ಲೆ

ನಿರಂತರ ಮಳೆ, ಮೋಡ ಮುಸುಕಿದ ವಾತಾವರಣ, ಅಬ್ಬರಿಸಿದ ವರುಣ ಜನಜೀವನ ಅಸ್ತವ್ಯಸ್ತ

Dharwada - Basavaraj Idli

ಹುಬ್ಬಳ್ಳಿ; ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಳೆ ಅಬ್ಬರ ತೀವ್ರವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರ ಪ್ರದೇಶದಲ್ಲಿ ರಸ್ತೆಗಳು ಕಿಚಿಕಿಚಿಯಾಗಿ ಓಡಾಡಲು ಆಗದಂತಾಗಿದ್ದರೆ, ಗಟಾರು, ಚರಂಡಿ ಕೊಳಚೆ ಕೆಲವೆಡೆ ಮನೆ ಹಾಗೂ ರಸ್ತೆಗೆ ನುಗ್ಗಿ ಅಸಹನೀಯ ವಾತಾವರಣ ನಿರ್ಮಾಣಗೊಂಡಿದೆ.

ಪಕ್ಕಾ ರಸ್ತೆ ಇರದ ಕೆಲವು ಬಡಾವಣೆಗಳಲ್ಲಿ ಜನರು ಹೊರಗೆ ಬರದಂತಾಗಿದೆ. ರಾಡಿಮಯ ರಸ್ತೆಯಲ್ಲಿ ಸಂಚಾರ ಅಸಾಧ್ಯವಾಗಿದೆ. ನಗರ ಪ್ರದೇಶದ ಅನೇಕ ಕಡೆಗಳಲ್ಲಿ ತಾತ್ಕಾಲಿಕ ತೇಪೆ ಹಚ್ಚಿದ್ದ ರಸ್ತೆಗಳಲ್ಲಿ ತೆಗ್ಗು ಹೊಂಡಗಳ ದರ್ಶನವಾಗುತ್ತಿದೆ.

ಗುರುವಾರ ಬೆಳಗ್ಗೆಯಿಂದಲೂ ಮೋಡ ಮುಸುಕಿದ ವಾತಾವರಣವಿದ್ದು, ಆಗಾಗ ತಾಸುಗಟ್ಟಲೇ ಜಡಿ ಮಳೆ ಸುರಿಯುತ್ತಿದೆ. ಹುಬ್ಬಳ್ಳಿ ಹಾಗೂ ಗ್ರಾಮೀಣ ಭಾಗದಲ್ಲಿ ಗುರುವಾರ ಹೆಚ್ಚಿನ ಮಳೆ- ದಾಖಲಾಗಿದೆ.

ಹುಬ್ಬಳ್ಳಿ ಹೋಬಳಿಯಲ್ಲಿ- 5.7 ಮಿಮೀ, ಛಬ್ಬಿ 14.8 ಮಿಮೀ, ಶಿರಗುಪ್ಪಿ 3.0 ಮಿಮೀ ಹಾಗೂ ಬ್ಯಾಹಟ್ಟಿ 8.6 ಮಿ.ಮೀ. ಮಳೆಯಾಗಿದೆ. ಗ್ರಾಮೀಣ ಭಾಗದಲ್ಲಿ ಜಮೀನುಗಳಿಗೆ ನೀರು ನುಗ್ಗಿದೆ. ಜೋಳ, ಹತ್ತಿ, ಮೆಣಸಿನಕಾಯಿ, ಉಳ್ಳಾಗಡ್ಡಿ ಸೇರಿ ಮುಂಗಾರಿನ ಕೆಲ ಬೆಳೆಗಳು ನೀರಲ್ಲಿ ನಿಂತಿವೆ.

ಅಧಿಕ ಮಳೆಯಿಂದ ಜಮೀನುಗಳಲ್ಲಿ ಇರುವ ಬೆಳೆಗಳಿಗೆ ಒಂದಿಷ್ಟು ಸಮಸ್ಯೆಯಾಗಿದೆ. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ವರೆಗೆ ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ನಗರ ತಹಸೀಲ್ದಾರ್ ಕಲಗೌಡ ಪಾಟೀಲ, ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ ತಿಳಿಸಿದ್ದಾರೆ.

ಸಂಭ್ರಮ ಕಸಿದ ಮಳೆ:
ಪ್ರತಿ ವರ್ಷ ಶೀಗಿ ಹುಣ್ಣಿಮೆಯಂದು ಎಲ್ಲೆಡೆ ಸಂಭ್ರಮ ಮನೆ ಮಾಡುತ್ತಿತ್ತು. ಭೂತಾಯಿಗೆ ಪೂಜೆ ನೆರವೇರಿಸಿ ಚರಗದ ನೈವೇದ್ಯ ಮಾಡುತ್ತಿದ್ದ ಕೃಷಿಕರು ನಂತರ ಕುಟುಂಬದವರು, ಬಂಧು ಬಾಂಧವರೊಂದಿಗೆ ಸಹ ಭೋಜನ ಸವಿಯುತ್ತಿದ್ದರು. ಆದರೆ, ಈ ವರ್ಷ ಮಳೆ ಸಂಪೂರ್ಣ ನಿರಾಸೆ ಮಾಡಿದೆ.

ವಾರದಿಂದ ಬಿಟ್ಟೂಬಿಡದೇ ಮಳೆ ಸುರಿಯುತ್ತಿರುವುದರಿಂದ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿದ್ದು ಕಾಲಿಡಲೂ ಆಗುತ್ತಿಲ್ಲ. ಹಾಗಾಗಿ ಹೊಲದಲ್ಲಿ ಕುಳಿತು ಸಹಭೋಜನ ಸವಿಯುವ ಯೋಗ ಸಿಗಲಿಲ್ಲ. ಕೃಷಿಕರು ಮನೆಯಲ್ಲಿಯೇ ಕುಳಿತು ಹಬ್ಬದ ಊಟ ಸವಿದರು.