ಜಿಲ್ಲೆ

ಹುಬ್ಬಳ್ಳಿಯಲ್ಲಿ ಭರ್ಜರಿ ಮಳೆ

ಹುಬ್ಬಳ್ಳಿ: ಕೆಲ ದಿನಗಳಿಂದ ಮಾಯವಾಗಿದ್ದ ಮಳೆರಾಯ ಮತ್ತೆ ದರ್ಶನ ನೀಡಿದ್ದಾನೆ. ಬಿಸಿಲು, ಸೆಕೆಮಯವಾಗಿದ್ದ ಮಹಾನಗರದಲ್ಲಿ ಭಾನುವಾರದ ಭರ್ಜರಿ ಮಳೆ ತಂಪೆರೆಯಿತು.

ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ಆಗಾಗ ಬಿಸಿಲನ ದರ್ಶನವಾಗುತ್ತಿತ್ತು. ಮಧ್ಯಾಹ್ನದ ವೇಳೆಗೆ ಸಂರ್ಪೂಣ ಮೋಡ ಕವಿದು ಕತ್ತಲಾವರಿಸಿ 1.30ರ ವೇಳೆಗೆ ಮಳೆ ಧೋ ಎಂದು ಸುರಿಯಿತು.

ಜಡಿ ಮಳೆಯಿಂದಾಗಿ ನಗರದ ಜನಜೀವನ ಅಸ್ತವ್ಯಸ್ತಗೊಂಡಿತು. ರಸ್ತೆ, ಗಟಾರುಗಳು ತುಂಬಿ ಹರಿದವು. ಬಹುತೇಕ ರಸ್ತೆಗಳಲ್ಲಿ ಸಂಚಾರಕ್ಕೆ ವ್ಯತ್ಯಯವಾಯಿತು. ತಗ್ಗು ಗುಂಡಿಮಯ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು.

ಏಕಾಏಕಿ ಬಂದ ಮಳೆಯಿಂದಾಗಿ ಕೆಲವರು ನನೆಯುತ್ತಲೇ ಓಡಾಡಬೇಕಾಯಿತು. ಸಣ್ಣ ಪುಟ್ಟ ವ್ಯಾಪಾರಿಗಳು ತೊಂದರೆ ಅನುಭವಿಸಿದರು. ನಗರದಲ್ಲಿ ರಾತ್ರಿಯವರೆಗೂ ಮೋಡ ಕವಿದ ವಾತಾವರಣವಿತ್ತು.

ಹಿಂಗಾರು ಪೂರ್ವ ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಸಂತಸ ಮೂಡಿದೆ. ಎರಡು ಮೂರು ವಾರದಿಂದ ಮಳೆಯನ್ನು ಕಾಣದ ಜಮೀನಿಗೆ ಅನುಕೂಲವಾಗಿದೆ. ಹಿಂಗಾರು ಬಿತ್ತನೆಗೆ ತಯಾರಿ ನಡೆಸಿರುವ ರೈತರಿಗೆ ಹುಮ್ಮಸ್ಸು ಬಂದಿದೆ.