ಮಂಗಲ ಗ್ರಾಮದ ಕೆಶಿಪ್ ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಹರಸಾಹಸ ಪಟ್ಟು ಸಂಚರಿಸಿದರು. 
ಜಿಲ್ಲೆ

ಹನೂರಿನಲ್ಲಿ ಜೋರು ಮಳೆ

ಹನೂರು: ತಾಲೂಕಿನ ಕೆಲ ಗ್ರಾಮಗಳಲ್ಲಿ ಶನಿವಾರ ಅರ್ಧಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಜೋರು ಮಳೆ ಸುರಿದರೆ, ಇನ್ನು ಕೆಲವೆಡೆ ಸಾಧಾರಣ ಹಾಗೂ ತುಂತುರು ಮಳೆಯಾಯಿತು. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ಕೊಂಚ ತಂಪು ಅನುಭವ ನೀಡಿದೆ.

ತಾಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಜನರು ಹೈರಾಣರಾಗಿದ್ದರು. ಇತ್ತ ಈ ಭಾಗದ ಮಲೆ ಮಹದೇಶ್ವರ, ಕಾವೇರಿ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಒಣಗಿದ್ದು, ಆಗಾಗ್ಗೆ ಬೆಂಕಿ ಕಾಣಿಸಿಕೊಂಡು ಸಸ್ಯ ಸಂಕುಲ ನಾಶವಾಗಿತ್ತು. ಕಳೆದ 15 ದಿನದ ಹಿಂದೆ ಅರಣ್ಯ ಪ್ರದೇಶದಿಂದ ಕೂಡಿರುವ ಪೊನ್ನಾಚಿ ಭಾಗದಲ್ಲಿ ಹಾಗೂ ನಾಲ್ಕೈದು ದಿನದ ಹಿಂದೆ ಮ.ಬೆಟ್ಟದಲ್ಲಿ ಸಾಧಾರಣಾ ಮಳೆಯಾಗಿತ್ತು. ಇದರಿಂದ ಈ ಭಾಗದ ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಶನಿವಾರ ತಾಲೂಕಿನಾದ್ಯಂತ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಮಧ್ಯಾಹ್ನ ಸುಮಾರು 1.30ರ ವೇಳೆಯಲ್ಲಿ ಒಡೆಯರಪಾಳ್ಯ, ಪಿ.ಜಿ ಪಾಳ್ಯ, ಉದ್ದಟ್ಟಿ, ಮಾವತ್ತೂರು, ಹಾವಿನಮೂಲೆ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಾಧಾರಣ ಮಳೆಯಾಯಿತು.

ಮಂಗಲ, ಆನಾಪುರ, ಗುಂಡಾಪುರ, ಬೂದುಬಾಳು ಈ ಭಾಗದಲ್ಲಿ ಸಂಜೆ 4ರಲ್ಲಿ ಗುಡುಗು ಸಹಿತ ಆರಂಭವಾದ ಜೋರು ಮಳೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಸುರಿಯಿತು. ಹನೂರು ಪಟ್ಟಣ ಸೇರಿದಂತೆ ಶಾಗ್ಯ, ಬಂಡಳ್ಳಿ ಹಾಗೂ ಲೊಕ್ಕನಹಳ್ಳಿ ಭಾಗದಲ್ಲಿ ತುಂತುರು ಹನಿಗಳಿಂದ ಕೂಡಿದ ಮಳೆಯಾಯಿತು. ಇದರಿಂದ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ಈ ಮಳೆ ತಂಪು ಅನುಭವ ನೀಡಿದ್ದು, ಕೊಂಚ ನಿಟ್ಟುಸಿರು ಬಿಟ್ಟಂತಾಯಿತು.

ರಸ್ತೆಯಲ್ಲೇ ನಿಂತ ನೀರು, ಪರದಾಡಿದ ಸವಾರರು: ಮಂಗಲ ಗ್ರಾಮದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿದ ಪರಿಣಾಮ ಇದೀಗ ನಿರ್ಮಿಸಿರುವ ಕೆ.ಶಿಪ್ ರಸ್ತೆಯಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಹಲವು ದೂರದವರೆಗೆ ನಿಂತಲ್ಲೇ ನಿಂತು ಕೆರೆಯಂತಾಯಿತು. ಇದರಿಂದ ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಸಂಚರಿಸಲು ಹರಸಾಹಪಟ್ಟರು. ಕಾರು ಹಾಗೂ ಇತರ ವಾಹನಗಳು ನಿಧಾನ ಗತಿಯಲ್ಲಿ ಸಾಗಿದವು. ಇತ್ತ ಮಳೆ ನೀರು ಸರ್ಕಾರಿ ಪ್ರಾಥಮಿಕ ಶಾಲಾ ಆವರಣಕ್ಕೂ ನುಗ್ಗಿತು. ಸದ್ಯ ಶನಿವಾರ ಮಧ್ಯಾಹ್ನದವರೆಗೆ ತರಗತಿ ಇದ್ದದ್ದರಿಂದ ಮಕ್ಕಳು ತೊಂದರೆಪಡುವುದು ತಪ್ಪಿತು. ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು.