ವಿಜಯಪುರ: ಬಿಸಿಲೂರಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಮಂಗಳವಾರ ಸಂಜೆಯಿಂದ ಬುಧವಾರ ಬೆಳಗಿನ ಜಾವದವರೆಗೂ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.
ಜಿಲ್ಲಾದ್ಯಂತ ವಾಡಿಕೆಯಂತೆ 2 ಮಿಮೀ ಆಗಬೇಕಿದ್ದ ಮಳೆ ಏಕಾಏಕಿ 47 ಮಿಮೀ ಆಗಿದ್ದು, ಜನ-ಜಾನುವಾರು ತೀವ್ರ ಸಂಕಷ್ಟಕ್ಕೆ ಸಿಲುಕಿತು. ನಗರ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದಲ್ಲದೇ ಕೆಲವು ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡವು. ಗ್ರಾಮೀಣ ಭಾಗದಲ್ಲಿ ಕೆರೆ-ಕಟ್ಟೆ, ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಕೆಲವೆಡೆ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯುಂಟಾಗಿದೆ.
ತಿಕೋಟಾ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 79.9 ಮಿಮೀ ಮಳೆಯಾಗಿದೆ. ಚಡಚಣ ತಾಲೂಕಿನಲ್ಲಿ 62.7, ನಿಡಗುಂದಿಯಲ್ಲಿ 59.8, ಕೊಲ್ಹಾರದಲ್ಲಿ 59.5, ಇಂಡಿಯಲ್ಲಿ 55.4, ಬಬಲೇಶ್ವರ ತಾಲೂಕಿನಲಲಿ 54.0, ವಿಜಯಪುರ ತಾಲೂಕಿನಲ್ಲಿ 46.5, ಮುದ್ದೇಬಿಹಾಳದಲ್ಲಿ 44.9, ಬಸವನಬಾಗೇವಾಡಿಯಲ್ಲಿ 44.8, ದೇವರಹಿಪ್ಪರಗಿಯಲ್ಲಿ 42.4, ತಾಳಿಕೋಟೆಯಲ್ಲಿ 20.2, ಸಿಂದಗಿ ತಾಲೂಕಿನಲ್ಲಿ 19.7 ಮಿಮೀ, ಆಲಮೇಲ ತಾಲೂಕಿನಲ್ಲಿ 8.1 ಮಿಮೀ ಮಳೆಯಾಗಿದೆ.
ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ- ವಿಜಯಪುರ ರಸ್ತೆಯಲ್ಲಿರುವ ಸಂಗಮನಾಥ ದೇವಸ್ಥಾನದ ಹಳ್ಳ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಬುಧವಾರ ಬೆಳಗ್ಗೆ ಹಳ್ಳದ ಸೇತುವೆ ದಾಟಲೆತ್ನಿಸಿದ ಬೈಕ್‌ಸವಾರನೋರ್ವ ನೀರಿನಲ್ಲಿ ಕೊಚ್ಚಿಕೊಂಡು ಹೊರಟಿದ್ದನು. ಅದೃಷ್ಟವಶಾತ್ ಪಾರಾಗಿದ್ದು, ಬೈಕ್ ಕೊಚ್ಚಿಕೊಂಡು ಹೋದ ದೃಶ್ಯ ಎದೆ ನಡುಗಿಸಿತು. ಬೈಕ್ ಸವಾರ ಕಳ್ಳಕವಟಗಿ ಗ್ರಾಮದ ಶ್ರೀಶೈಲ ಗಿಡ್ನವರ ಎನ್ನಲಾಗಿದ್ದು, ಸದ್ಯ ಯಾವುದೇ ಅಪಾಯವುಂಟಾಗಿಲ್ಲವೆಂದು ಸ್ಥಳೀಯರು ತಿಳಿಸಿದರು. ಸ್ಥಳೀಯ ಸಂಗಮನಾಥ ದೇವಸ್ಥಾನ ಸಂಪೂರ್ಣವಾಗಿ ಜಲಾವೃತವಾಗಿದ್ದರಿಂದ ಭಕ್ತರ ದರ್ಶನಕ್ಕೆ ಅಡಚಣೆಯುಂಟಾಯಿತು.
ಅಲ್ಲದೇ, ತಿಕೋಟಾ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದ್ದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆಗೆ ಸಿಲುಕಿದರು. ಶಾಲೆ ಕೊಠಡಿಯೊಳಗೆ ನಿಂತ ನೀರು ಹೊರಹಾಕಲು ವಿದ್ಯಾರ್ಥಿಗಳು ಹರಸಾಹಸಪಟ್ಟರು. ಬಿಸಿಯೂಟದ ಸಾಮಗ್ರಿಗಳು ಹಾಳಾದರೆ ಪಾತ್ರೆಗಳಿಂದಲೇ ವಿದ್ಯಾರ್ಥಿಗಳು ಕಲುಷಿತ ನೀರು ಹೊರಹಾಕಿದ ದೃಶ್ಯ ಮನಕಲುಕಿತು. ಶಾಲೆ ಕೊಠಡಿಗಳ ಗುಣಮಟ್ಟದ ಬಗ್ಗೆ ಆತಂಕ ಕಾಡುತ್ತಿದ್ದು, ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕೆಂದು ಪಾಲಕರು ಆಗ್ರಹಿಸಿದರು. ಶಾಲಾ ಅಂಗಳವೆಲ್ಲ ಜಲಾವೃತಗೊಂಡಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.
ಮುದ್ದೇಬಿಹಾಳದಲ್ಲಿ ಎರಡು ಜಾನುವಾರು ಜೀವಹಾನಿಯಾಗಿದ್ದು, ಮಣ್ಣಿನ ಮನೆಗಳು ಹಾನಿಗೀಡಾಗಿವೆ. ಜಿಲ್ಲಾದ್ಯಂತ ಒಟ್ಟು 19 ಮನೆಗಳಿಗೆ ಹಾನಿಯುಂಟಾಗಿದೆ. ವಿಜಯಪುರ-3, ಬಬಲೇಶ್ವರ-3, ತಿಕೋಟಾ-1, ಕೊಲ್ಹಾರದಲ್ಲಿ -4, ಮುದ್ದೇಬಿಹಾಳ-6. ತಾಳಿಕೋಟೆ-1, ಇಂಡಿಯಲ್ಲಿ 1 ಮನೆ ಹಾನಿಗೀಡಾಗಿದೆ. ವಿಜಯಪುರ ನಗರ ಪ್ರದೇಶದ ಶಹಾಪೇಟೆ, ಗೋಳಗುಮ್ಮಟ ಹಿಂಭಾಗದ ಪ್ರದೇಶ, ರಾಮನಗರ, ಜಾಮಿಯಾ ಮಸೀದಿ ಹಿಂದಿನ ಪ್ರದೇಶಗಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯುಂಟು ಮಾಡಿದೆ. ಡೋಣಿ ನದಿ ಪಾತ್ರದಲ್ಲಿ ಜಮೀನುಗಳಿಗೆ ನೀರು ನುಗ್ಗಿದರೆ ಕೃಷ್ಣೆ ಹಾಗೂ ಭೀಮಾ ನದಿಯಲ್ಲಿ ಮಹಾರಾಷ್ಟ್ರದಲ್ಲಾದ ಮಳೆ ನೀರಿನ ಜೊತೆ ಜಿಲ್ಲೆಯಲ್ಲಾದ ಮಳೆ ಪ್ರಮಾಣ ಸೇರಿ ನೀರಿನ ಪ್ರಮಾಣ ಹೆಚ್ಚಾಗಿದೆ. ನದಿ ಪಾತ್ರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.