ಜಿಲ್ಲೆ

ಭಾರಿ ಮಳೆ ಮೂನ್ಸೂಚನೆ: ನಾಳೆ 4 ಜಿಲ್ಲೆಗಳಿಗೆ ರೆಡ್​ ಅಲರ್ಟ್ ಘೋಷಣೆ

ಹರೀಶ್​​ ಕೆ.ಸಿ.

ಬೆಂಗಳೂರು: ರಾಜ್ಯಾದ್ಯಂತ ವರುಣಾರ್ಭಟ ಮುಂದುವರಿದಿದೆ. ಶನಿವಾರವೂ ವಿವಿಧೆಡೆ ಭಾರಿ ಮಳೆ ಬಿದ್ದಿದೆ. ಬಾಗಲಕೋಟೆಯ ಇಲಕಲ್​, ಬೆಂ.ಗ್ರಾಮಾಂತರದ ದೊಡ್ಡಬಳ್ಳಾಪುರ, ಬೀದರ್​ನ ಔರದ್​, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡದ ಮಂಗಳೂರು, ಉತ್ತರ ಕನ್ನಡದ ಗೆರಸೊಪ್ಪ, ಕೊಡಗಿನ ಗೋಣಿಕೊಪ್ಪ, ಶಿವಮೊಗ್ಗದ ಆಗುಂಬೆ ಹಾಗೂ ರಾಮನಗರದಲ್ಲಿ ಭರ್ಜರಿ ವರ್ಷಧಾರೆಯಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗಿನಲ್ಲಿ ಜೂ 23ರಿಂದ ಜೂ 25ರವರೆಗೆ ಅತಿ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್​ ​ ಅಲರ್ಟ್ ಘೋಷಿಸಿದೆ. ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮುಂದಿನ ಮೂರು ದಿನ ಆರೆಂಜ್​ ಅರ್ಲಟ್​ ಇದ್ದರೆ, ಮೈಸೂರು, ಬೀದರ್​ನಲ್ಲಿ ಜೂ 23, ಜೂ 24ರಂದು ಯೆಲ್ಲೋ ಅರ್ಲಟ್​ ಇರಲಿದೆ. ಉಳಿದ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ವರ್ಷಧಾರೆಯಾಗಲಿದೆ.

ಹವಾಮಾನ ಇಲಾಖೆ ಹಿರಿಯ ಅಧಿಕಾರಿ ಸಿ.ಎಸ್​.ಪಾಟೀಲ್​ ಮಾತನಾಡಿ, ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೆ ಸುಳಿಗಾಳಿ ಹಾಗೂ ಪೂರ್ವ ಅರಬ್ಬಿ ಸಮುದ್ರದಲ್ಲಿ ಮೋಡ ಕವಿದ ವಾತಾವರಣ ಇರುವ ಕಾರಣದಿಂದಾಗಿ ರಾಜ್ಯದಲ್ಲೆಡೆ ಉತ್ತಮ ಮಳೆ ಬೀಳುತ್ತಿದೆ. ಕೆಲ ಜಿಲ್ಲೆಗಳಲ್ಲಿ ಮಳೆಯ ಜತೆಗೆ ಗುಡುಗು ಮಿಂಚು ಇರಲಿದ್ದು, ಗಾಳಿಯ ವೇಗವೂ ಜಾಸ್ತಿಯಾಗಲಿದೆ. ಅರಬ್ಬಿ ಸಮುದ್ರದಲ್ಲಿ ಪ್ರತಿ ಗಂಟೆಗೆ 45-55 ಕಿ.ಮೀ.ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಹಿನ್ನೆಲೆಯಲ್ಲಿ ಜೂ 23ರಿಂದ ಜೂ 26ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ಮುಂದಿನ ದಿನಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ ಎಂದರು. ಬೆಂಗಳೂರಿನಲ್ಲಿ ಮುಂದಿನ 4 ದಿನ ಭಾಗಶ@ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದೆ. ಕೆಲವೊಮ್ಮೆ ಮೇಲ್ಮೆ ಗಾಳಿ ಪ್ರಬಲವಾಗಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವೂ ಕ್ರಮವಾಗಿ 31 ಡಿ.ಸೆ. ಹಾಗೂ 21 ಡಿ.ಸೆ. ಇರಲಿದೆ ಎಂದು ಮಾಹಿತಿ ನೀಡಿದರು.