ಜಿಲ್ಲೆ

ಜಿಲ್ಲೆಯ ಜಲಧಾರೆಗಳ ಗತವೈಭವ

Chikkaballapur

ಎನ್.ವೆಂಕಟೇಶ್, ಚಿಕ್ಕಬಳ್ಳಾಪುರ
ಜಿಲ್ಲಾದ್ಯಂತ ಕಳೆದ ಹಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಜಲಧಾರೆಗಳು ಗತ ವೈಭವದಿಂದ ಆಕರ್ಷಕ ಪ್ರವಾಸಿ ತಾಣಗಳಾಗಿ ಜನರನ್ನು ಸೆಳೆಯುತ್ತಿವೆ.
ಮತ್ತೊಂದೆಡೆ ವರುಣರಾಯನ ಆರ್ಭಟಕ್ಕೆ ಜನ ಮತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.


ಈಗಾಗಲೇ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ, ಜಕ್ಕಲಮಡುಗು, ಗೌರಿಬಿದನೂರಿನ ಉತ್ತರ ಪಿನಾಕಿನಿ, ಗುಡಿಬಂಡೆಯ ಅಮಾನಿ ಭೈರಸಾಗರ ಕೆರೆ, ಯಾದರ್ಲಹಳ್ಳಿ ಸೇರಿ ಹಲವು ಕೆರೆಗಳು ತುಂಬಿ ತುಳುಕಾಡುತ್ತಿವೆ. ಬಹುತೇಕ ಕೋಡಿ ಹರಿದಿದೆ. ನೀರು ಹಾಲಿನಂತೆ ಉಕ್ಕಿ ಹರಿಯುತ್ತಿರುವ ರಮಣೀಯ ದೃಶ್ಯ ನೋಡಲು ಜನರು ಮುಗಿ ಬೀಳುತ್ತಿದ್ದಾರೆ. ಪ್ರಸಕ್ತ ಮುಂಗಾರು ಅವಧಿಯಲ್ಲಿ ವರುಣರಾಯ ಒಳ್ಳೆಯ ಕೃಪೆ ತೋರಿದ್ದು ವ್ಯಾಪಕವಾಗಿ ಉತ್ತಮ ಮಳೆ ಬೀಳುತ್ತಿದೆ. ಮುಂಬರುವ ಮೂರ್ನಾಲ್ಕು ದಿನಗಳಲ್ಲೂ ಮಳೆ ಬೀಳುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ತಿಳಿಸಿದೆ.


ಕೋಡಿ ಒಡೆದು ಅವಾಂತರ

ಗುಡಿಬಂಡೆ: ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಂಪಸಂದ್ರ ಕೆರೆ ಕೋಡಿಯ ಕಾಲುವೆ ಒಡೆದು ರೈತ ವಾಸುದೇವಪ್ಪ ತೋಟಕ್ಕೆ ನೀರು ನುಗ್ಗಿದೆ. ನೀರಿನ ರಭಸಕ್ಕೆ ಚೆಂಡು ಹೂವು ತೋಟ ನಾಶವಾಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

ಜನ, ವಾಹನ ಸಂಚಾರಕ್ಕೆ ಪರದಾಟ: ಒಂದೆಡೆ ಉತ್ತಮ ಮಳೆಯು ಸಂತಸಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ಹಲವು ಪ್ರದೇಶಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಜನ ಮತ್ತು ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ. ಗುಡಿಬಂಡೆಯ ಅಮಾನಿ ಭೈರಸಾಗರ ಕೆರೆಯು ಕೋಡಿ ಹರಿದಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಇನ್ನು ಆಗಾಗ ಸುರಿಯುತ್ತಿರುವ ಮಳೆಗೆ ತಾಲೂಕಿನ ಚೊಕ್ಕಹಳ್ಳಿ ಕ್ರಾಸ್ ಸಮೀಪದ ತಾತ್ಕಲಿಕ ಎಪಿಎಂಸಿ ಹೂವಿನ ಮಾರುಕಟ್ಟೆಯ ಪ್ರದೇಶದಲ್ಲಿ ಮಳೆಗೆ ಕೆಸರು ಗದ್ದೆಯಂತಾಗಿದ್ದು ಹೂವಿನ ಬೆಳೆಗಾರರು ಮತ್ತು ವ್ಯಾಪಾರಸ್ಥರು ತೊಂದರೆ ಅನುಭವಿಸುವಂತಾಗಿದೆ. ಸ್ಥಳೀಯ ಆಡಳಿತ ಸಂಸ್ಥೆಗಳ ನಿರ್ಲಕ್ಷ್ಯದಿಂದ ಅವೈಜ್ಞಾನಿಕ ಚರಂಡಿಗಳಲ್ಲಿ ನೀರು ಹರಿಯದೇ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿರುವುದರಿಂದ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.


ಉತ್ತರ ಪಿನಾಕಿನಿಗೆ ಜೀವಕಳೆ
ಗೌರಿಬಿದನೂರು: ತಾಲೂಕಿನಾದ್ಯಾಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಉತ್ತರ ಪಿನಾಕಿನಿ ನದಿ ಮೈದುಂಬಿ ಹರಿಯುತ್ತಿದೆ. ತಾಲೂಕಿನ ಡಿ.ಪಾಳ್ಯದಲ್ಲಿ 138 ಮಿ.ಮೀ ಗರಿಷ್ಠ ಮಳೆಯಾದ್ದು, ಹೊಸೂರು 75.2, ವಾಟದಹೊಸಹಳ್ಳಿ 50, ಮಂಚೇನಹಳ್ಳಿ 31, ತೊಂಡೇಬಾವಿ 70, ತಿಪ್ಪಗಾನಹಳ್ಳಿ 37 ಮಿ.ಮೀ ಸೇರಿ ಒಟ್ಟಾರೆ
ತಾಲೂಕಿನಲ್ಲಿ ಸರಾಸರಿ 59 ಮಿ.ಮೀ ಮಳೆಯಾಗಿದೆ.
ಉತ್ತರಪಿನಾಕಿನಿಗೆ ಜೀವಕಳೆ: ಹತ್ತು ವರ್ಷಗಳ ಹಿಂದೆ ಬರಪೀಡಿತವಾಗಿ ಉತ್ತರ ಪಿನಾಕಿನಿ ಒಡಲಾಳ ಬತ್ತಿ ಹೋಗಿತ್ತು. ಆದರೆ ಕಳೆದ ಒಂದು ವರ್ಷದಿಂದ ನಂದಿ ಗಿರಿ ಸಾಲಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನದಿ ಜೀವಕಳೆ ಪಡೆದುಕೊಂಡಿದೆ. ಕಳೆದ ಬಾರಿಯಂತೆ ಈ ಬಾರಿ ಕೂಡ ಉಕ್ಕಿ ಹರಿಯುತ್ತಿದೆ. ಕೆರೆ-ಕುಂಟೆಗಳು ತುಂಬಿವೆ. ಗೌರಿಬಿದನೂರು ನಗರದ ಮೂಲಕ ಉತ್ತರ ಪಿನಾಕಿನಿ ನದಿ ನೀರು ಕಿಂಡಿ ಅಣೆಕಟ್ಟು ಸೇರುತ್ತಿದೆ. ಅಲ್ಲಿಂದ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಉತ್ತರ ಪಿನಾಕಿನಿ ಉಕ್ಕಿ ಹರಿಯುತ್ತಿರುವುದನ್ನು ತಾಲೂಕಿನ ಜನರು ನೋಡಿ ಕ್ಷಿಂಭ್ರಮಿಸುತ್ತಿದ್ದಾರೆ.

ಧಾರಾಕಾರ ಮಳೆಗೆ ಸಂಪೂರ್ಣ ಭರ್ತಿ

ಬತ್ತಿ ಹೋಗಿ ಸ್ವರೂಪವನ್ನು ಕಳೆದುಕೊಂಡಿದ್ದ ಜಿಲ್ಲೆಯ ಚಿತ್ರಾವತಿ, ಉತ್ತರ ಪಿನಾಕಿನಿ, ಪಾಪಾಘ್ನಿ ನದಿಗಳಿಗೆ ಹೊಸ ಜೀವ ಕಳೆ ಬಂದಿದ್ದು, ಉಕ್ಕಿ ಹರಿಯುತ್ತಿವೆ. ಅಕ್ರಮ ಒತ್ತುವರಿಗೆ ನಲುಗಿದ್ದ ಪಾಪಾಘ್ನಿ, ಉತ್ತರಪಿನಾಕಿನಿ ನದಿಯು ಅಭಿವೃದ್ಧಿ ಕೆಲಸಗಳಿಂದ ಕಳೆದ ಎರಡು ವರ್ಷಗಳಿಂದಲೂ ಹಳೇ ಗತ ವೈಭವ ಪಡೆದಿದೆ. ಇದರ ವ್ಯಾಪ್ತಿಯ ಹಲವು ಕೆರೆಗಳು ಇತ್ತೀಚೆಗೆ ಧಾರಾಕಾರ ಮಳೆಗೆ ಸಂಪೂರ್ಣವಾಗಿ ಭರ್ತಿಯಾಗಿವೆ. ಮುಂಗಾರು ಆರಂಭದಲ್ಲಿಯೇ ಬಹುತೇಕ ಜಿಲ್ಲೆಯ ಎಲ್ಲ ಕೆರೆಗಳು ಮತ್ತು ನದಿಗಳು ತುಂಬಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ನೀರು ಸಂಗ್ರಹವಾಗುವ ನಿರೀಕ್ಷೆ ಇದೆ. ಇದರ ನಡುವೆ ಪ್ರತಿ ವರ್ಷದಂತೆ ಕೋಡಿ ಹರಿದು ನೀರು ಆಂಧ್ರ ಪಾಲಾಗುತ್ತಿದೆ. ಈ ಭಾಗದಲ್ಲಿ ಶಾಶ್ವತ ನೀರಾವರಿ ಸೌಲಭ್ಯದ ಕೊರತೆ ಇದೆ. ಇದರಿಂದ ಎಚ್.ಎನ್.ವ್ಯಾಲಿ, ಎತ್ತಿನಹೊಳೆ ಯೋಜನೆ, ಕೃಷ್ಣ ನದಿ ನೀರಿನ ಹಂಚಿಕೆ ಸೇರಿ ನಾನಾ ಯೋಜನೆಗಳ ಮೂಲಕ ನೀರನ್ನು ಹರಿಸಲು ಸರ್ಕಾರವು ಕೋಟ್ಯಂತರ ರೂ. ಅನುದಾನ ಖರ್ಚು ಮಾಡುತ್ತಿದೆ. ಇದರ ನಡುವೆ ಜಿಲ್ಲೆಯಲ್ಲಿನ ನದಿಗಳು, ಕೆರೆಗಳನ್ನು ಪ್ರಾಮಾಣಿಕವಾಗಿ ಸಂರಕ್ಷಿಸುವ ಕೆಲಸವಾಗುತ್ತಿಲ್ಲ. ಅಕ್ರಮ ಒತ್ತುವರಿ, ತುಂಬಿದ ಹೂಳು ಮತ್ತು ವ್ಯಾಪಕವಾಗಿ ಬೆಳೆದ ಮರಗಳಿಂದ ಸ್ವರೂಪ ಕಳೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಧಾರಾಕಾರ ಮಳೆಗೆ ಸಾಕಷ್ಟು ನೀರು ಸಂಗ್ರಹವಾಗುವಂತಾಗಲು ಹಿಂದಿನ ತಲೆಮಾರಿನವರ ಮಾದರಿಯಲ್ಲಿ ಕೆರೆ ಮತ್ತು ರಾಜಕಾಲುವೆಗಳ ಅಭಿವೃದ್ಧಿಗೆ ಒತ್ತು ಕೊಡಬೇಕಾಗಿದೆ.

ಪ್ರವಾಸಿಗರ ದಿಲ್‌ಖುಷ್: ಬರಕ್ಕೆ ಹೆಸರುವಾಸಿಯಾಗಿರುವ ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ನದಿಗಳು, ಕೆರೆಗಳು, ಜಲಾಶಯಗಳಲ್ಲಿ ನೀರು ತುಂಬಿ ಹರಿಯುತ್ತಿವೆ. ಅರಣ್ಯ ಪ್ರದೇಶದಲ್ಲಿ ಜಲಪಾತಗಳಲ್ಲಿ ಹಾಲಿನಂತೆ ನೀರು ಧುಮುಕುತ್ತಿರುವ ಮನ ಮೋಹಕ ದೃಶ್ಯ ಕಂಡು ಪ್ರವಾಸಿಗರು ಮನಸೋಲುತ್ತಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದುಕೊಂಡು ಈ ಭಾಗ ಮಾತ್ರವಲ್ಲದೇ ಬೆಂಗಳೂರು ಸೇರಿ ವಿವಿಧೆಡೆಯಿಂದ ಟೆಕ್ಕಿಗಳು, ವಿದ್ಯಾರ್ಥಿಗಳು, ಪ್ರವಾಸಿಗರು ತಂಡೋಪತಂಡವಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಸೌಂದರ್ಯದ ಸೊಬಗನ್ನು ಮೈಗೂಡಿಸಿಕೊಂಡಿರುವ ಜಲಪಾತವನ್ನು ಕಂಡು ಖುಷಿಪಡುತ್ತಿದ್ದಾರೆ.


ಚಿಂತಾಮಣಿಯ ಕನ್ನಂಪಲ್ಲಿ ಕೆರೆ ಕೋಡಿಗೆ ಕ್ಷಣಗಣನೆ
ಚಿಂತಾಮಣಿ:
ನಗರಸಭೆ ಕನ್ನಂಪಲ್ಲಿ ಕೆರೆ ಭರ್ತಿಯಾಗಿ ಶೀಘ್ರವೇ ಕೋಡಿ ಹರಿಯುವ ಹಿನ್ನೆಲೆಯಲ್ಲಿ ಕೆರೆಯ ಪಕ್ಕದ ರಸ್ತೆಯಲ್ಲಿ ಮತ್ತು ಕೋಡಿ ಹರಿಯುವ ರಸ್ತೆಯಲ್ಲಿ ಬೆಳೆದಿದ್ದ ಗಿಡಗಂಟೆಗಳ ಶುಚಿತ್ವಕ್ಕೆ ನಗರದ ಜನತೆಯೇ ಮುಂದಾಗಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ ಕನ್ನಂಪಲ್ಲಿ ಕೆರೆ ಕೋಡಿ ಹೋಗುವ ಹರಿಯುವ ಹಂತದಲ್ಲಿ ಇದೆ. ಕೆರೆಯ ಕೋಡಿ ಮತ್ತು ಸುತ್ತಲೂ ನಿರ್ಮಾಣ ಮಾಡಿರುವ ತಡೆಗೋಡೆಯ ಪಕ್ಕದಲ್ಲಿ ಬೆಳೆದಿದ್ದ ಗಿಡಗಳನ್ನು ಬೆಂಗಳೂರು ರಸ್ತೆಯಲ್ಲಿ ಪ್ರತಿನಿತ್ಯ ವಾಯುವಿಹಾರ ನಡೆಸುವ ಮಂಜುನಾಥರೆಡ್ಡಿ, ವಿಶ್ವನಾಥ ರೆಡ್ಡಿ, ಪ್ರಸಾದ್, ಸೋಮೇಶೇಖರ್, ನಾಗರಾಜ್, ಶ್ರೀನಾಥ್, ಅನಿಲ್, ನಾಗೇಂದ್ರಸ್ವಾಮಿ ಮತ್ತಿತರ ತಂಡ ಕಿತ್ತು ಹಾಕಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿದ್ದಾರೆ. ನಗರದ 12ನೇ ವಾಡಿನ ನಗರಸಭೆ ಸದಸ್ಯ ಮಂಜುನಾಥ್ ನೇತೃತ್ವದ ಸ್ನೇಹಿತರ ತಂಡ ಕೆರೆಯ ಜೈನ್ ಶಾಲೆ ರಸ್ತೆಯ ಕನ್ನಂಪಲ್ಲಿ ಕೆರೆಯ ತಡೆಗೋಡೆ ಕಬ್ಬಿಣದ ತಂತಿ ಪಕ್ಕದಲ್ಲಿ ಬೆಳೆದಿದ್ದ ಗಿಡಗಳನ್ನು ಕಿತ್ತು ಹಾಕುವ ಮೂಲಕ ಕೆರೆಯ ಬಳಿ ಶುಚಿತ್ವಕ್ಕೆ ಮುಂದಾಗಿದ್ದಾರೆ.