ಜಿಲ್ಲೆ

ಭಾರಿ ಮಳೆಗೆ ಶಿರಾಡಿಘಾಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್

ಹಾಸನ: ಹಾಸನ ಸೇರಿದಂತೆ ವಿವಿಧೆಡೆ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ಜನ ಸಾಮಾನ್ಯರು ಹೈರಾಣಾಗಿದ್ದಾರೆ. ಕೆಲವೆಡೆ ರಸ್ತೆಯ ಮೇಲೆ ನೀರು ತುಂಬಿ ಹರಿಯುತ್ತಿದೆ.

ಸಕಲೇಶಪುರ ಭಾಗದ ಹಲವು ಕಡೆಗಳಲ್ಲಿ ಭೂಕುಸಿತ ಉಂಟಾಗುತ್ತಿದ್ದು, ಬಿರುಗಾಳಿ ಸಹಿತ ಮಳೆಯ ಅಬ್ಬರಕ್ಕೆ ಗಿಡ ಮರಗಳು ನೆಲಕ್ಕುರುಳುತ್ತಿವೆ. ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತ: ಸಕಲೇಶಪುರ ತಾಲೂಕಿನ, ಕಡಗರವಳ್ಳಿ, ಬಾಚೀಹಳ್ಳಿ, ವಳಲಹಳ್ಳಿ, ಹೊಂಗಡಹಳ್ಳ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಳೆ ಮುಂದುವರಿದಿದ್ದು ಮತ್ತೆ ಗುಡ್ಡ ಕುಸಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸ್ಥಳಕ್ಕೆ ಎಸಿ ರಾಜೇಶ್, ತಹಸೀಲ್ದಾರ್ ಸುಪ್ರಿತಾ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಸಾಲುಗಟ್ಟಿ ನಿಂತಿರುವ ವಾಹನಗಳು: ಭಾರಿ ಮಳೆಗೆೆ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಘಾಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಗಂಟೆಗಟ್ಟಲೆಯಿಂದ ರಸ್ತೆಯಲ್ಲೇ ವಾಹನಗಳು ನಿಂತಿವೆ. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ವಾಹನ ಸವಾರರು ಪರದಾಡುವಂತಾಗಿದೆ. ವೀಕೆಂಡ್ ಹಿನ್ನೆಲೆ ವಾಹನ ಸಂಚಾರ ಹೆಚ್ಚಿದೆ.

ಇನ್ನೊಂದೆಡೆ ಟ್ಯಾಂಕರ್‌ನಿಂದ ಆಯಿಲ್ ಸೋರುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ರಸ್ತೆಯ ತಿರುವಿನಲ್ಲಿ ಬೃಹತ್ ಗಾತ್ರದ ವಾಹನಗಳ ಚಕ್ರಗಳು ಜಾರುತ್ತಿವೆ. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.