ವಿರಾಜಪೇಟೆ : ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಬೇಟೋಳಿ, ಹೆಗ್ಗಳ, ಆರ್ಜಿ, ಪೆರುಂಬಾಡಿ, ಮಗ್ಗುಲ, ಬಿಟ್ಟಂಗಾಲ ಭಾಗದಲ್ಲಿ ಶನಿವಾರ ಗುಡುಗು ಸಹಿತ ಭರ್ಜರಿ ಮಳೆ ಸುರಿದಿದೆ.
ಬೆಳಗ್ಗಿನಿಂದಲೇ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ ಭರ್ಜರಿ ಮಳೆ ಸುರಿಯಿತು. ಸಂಜೆ ಬಳಿಕ ತುಂತುರು ಮಳೆ ಸುರಿಯಿತು.
ವಿರಾಜಪೇಟೆ ಪಟ್ಟಣದಲ್ಲಿ ಮಧ್ಯಾಹ್ನ ಸುರಿದ ಭಾರಿ ಮಳೆ ಪರಿಣಾಮ ಪಟ್ಟಣದಲ್ಲಿ ಮುಖ್ಯರಸ್ತೆಯಲ್ಲಿ ನೀರು ಹರಿಯಿತು. ಇದರಿಂದ ಕೆಲ ಕಾಲ ವಾಹನ ಸಂಚಾರದಲ್ಲಿ ತೊಡಕುಂಟಾಯಿತು. ದ್ವಿಚಕ್ರ ವಾಹನ ಸವಾರರು ಪರದಾಡಿದರು. ಅಲ್ಲದೆ ಪಟ್ಟಣದ ಬಹುತೇಕ ರಸ್ತೆಗಳಲ್ಲಿ ನೀರು ಉಕ್ಕಿ ಹರಿಯಿತು. ಪಾದಚಾರಿಗಳು ಪರದಾಡುವಂತಾಯಿತು. ವಿರಾಜಪೇಟೆಯ ಮಟನ್ ಮಾರುಕಟ್ಟೆಯ ಬಳಿ ಕೊಳಚೆ ನೀರು ರಸ್ತೆಯ ಮೇಲೆ ಹರಿದು ಜನರು ತೊಂದರೆ ಅನುಭವಿಸುವಂತಾಯಿತು.