ಜಿಲ್ಲೆ

ಕಾರ್ಕಳ ತಾಲೂಕಿನಾದ್ಯಂತ ಗಾಳಿ ಮಳೆಗೆ ಅಪಾರ ಹಾನಿ

ಇಂದಿರಾ ಎನ್ ಕೆ

ಕಾರ್ಕಳ: ಭಾನುವಾರ ಸಂಜೆಯ ವೇಳೆಗೆ ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನಾದ್ಯಂತ ವಿವಿಧ ಕಡೆಗಳಲ್ಲಿ ಅಪಾರ ಹಾನಿಯುಂಟಾಗಿದೆ. ದುರ್ಗಾ ಗ್ರಾಮದ ಮಾಂಜ ಎಂಬಲ್ಲಿನ ಗಂಗಾಧರ ಕೋಟ್ಯಾನ್ ಅವರ ಮನೆಗೆ ಗಾಳಿ ಮಳೆಗೆ ಭಾಗಶಃ ಹಾನಿಯಾಗಿದೆ. ಹಾಗೂ ಮನೆಯ ಬಳಿಯಲ್ಲಿದ್ದ ಕೋಳಿ ಫಾರ್ಮ್ ಸಂಪೂರ್ಣ ಬಿದ್ದು ನಾಲ್ಕು ಸಾವಿರಕ್ಕೂ ಅಧಿಕ ಕೋಳಿ ಮರಿಗಳು ಸತ್ತು ಹೋಗಿದೆ. ಹಾಗೂ ತೋಟದಲ್ಲಿ 50ಕ್ಕೂ ಅಧಿಕ ಅಡಕೆ ಮರಗಳು ಬಿರುಗಾಳಿಗೆ ಮುರಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ.

ಹಿರ್ಗಾನ ಗ್ರಾಮದ ಪಾಲಿಜೆ ಎಂಬಲ್ಲಿನ ನಿವಾಸಿ ಸೂರಪ್ಪ ಎಂಬುವರ ನಿರ್ಮಾಣ ಹಂತದಲ್ಲಿರುವ ಮನೆಯ ಮೇಲ್ಛಾವಣಿ ಗಾಳಿಗೆ ಹಾರಿಹೋಗಿದೆ. ಮಿಯ್ಯರು ಗ್ರಾಮದ ಶಾಲಾ ಬಳಿಯ ನಿವಾಸಿ ಗಫೂರ್ ಶೇಖ್ ಸಾಹೇಬ್ ಅವರ ವಾಸದ ಮನೆ ಹಾನಿಗೀಡಾಗಿದೆ. ಗ್ರಾಮದ ಹಸನ್ ಎಂಬುವರ ವಾಸದ ಮನೆಗೆ ಹಾನಿಯುಂಟಾಗಿದೆ. ಮಿಯ್ಯರು ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಸುಶೀಲಾ ಹೆಗ್ಡೆ ಎಂಬುವರ ಮನೆಯ ಸಿಮೆಂಟ್ ಶೀಟ್ ಗಾಳಿಗೆ ಹಾರಿಹೋಗಿದೆ. ಹಿರ್ಗಾನ ಗ್ರಾಮದ ನಡುಮನೆ ನೆಲ್ಲಿಕಟ್ಟೆ ಎಂಬಲ್ಲಿನ ನಿವಾಸಿ ಹರೀಶ್ಚಂದ್ರ ಪ್ರಭು ಎಂಬುವರಿಗೆ ಸೇರಿದ ಅಡಕೆ ತೋಟದಲ್ಲಿ 30 ಅಡಕೆ ಮರಗಳು ತುಂಡಾಗಿವೆ. ನಲ್ಲೂರು ಗ್ರಾಮದ ಬಿಚ್ಚನಬೆಟ್ಟು ಎಂಬಲ್ಲಿನ ನಿವಾಸಿ ಗೀತಾ ಎಂಬುವರ ವಾಸದ ಮನೆಗೆ ಗಾಳಿ ಮಳೆಯಿಂದ ಹಾನಿಯುಂಟಾಗಿ ನಷ್ಟ ಸಂಭವಿಸಿದೆ.