ಬೆಂಗಳೂರು:ಉತ್ತರ ಗುಜರಾತ್ನಿಂದ ಉತ್ತರ ಕೇರಳದ ಉದ್ದಕ್ಕೂ ಸಮುದ್ರ ಮಟ್ಟದಲ್ಲಿ ದಟ್ಟ ತೇವಾಂಶ ಭರಿತ ಮೋಡಗಳಿರುವ ಹಿನ್ನೆಲೆಯಲ್ಲಿ ಮುಂದಿನ 5 ದಿನ ರಾಜ್ಯದಲ್ಲಿ ಮಳೆ ಇನ್ನಷ್ಟು ಬಿರುಸುಗೊಳ್ಳಲಿದೆ.
ಶಿವಮೊಗ್ಗದ ಆಗುಂಬೆ, ಕೊಡಗಿನ ಗೋಣಿಕೊಪ್ಪ, ಕಲಬುರಗಿ, ದಣ ಕನ್ನಡದ ಮಂಗಳೂರು ಮತ್ತು ಚಿಕ್ಕಮಗಳೂರಿನ ಮೂಡಗೆರೆ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಶನಿವಾರ ಧಾರಾಕಾರ ಮಳೆಯಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಜು.15, ಜು.16ರಂದು ಅತಿ ಭಾರಿ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅರ್ಲಟ್ ಘೋಷಿಸಿದೆ. ಈ ಸಂದರ್ಭದಲ್ಲಿ 204 ಮಿಮೀ ಮಳೆ ಬೀಳುವುದನ್ನು ಇಲಾಖೆ ಅಂದಾಜಿಸಿದೆ.
ಈ ಮೇಲಿನ ಜಿಲ್ಲೆಗಳಲ್ಲಿ ಜು.14 ಮತ್ತು ಜು.17ರಿಂದ ಮುಂದಿನ ಎರಡು ದಿನ ಆರೆಂಜ್ ಅರ್ಲಟ್ ಇರಲಿದೆ. ಪ್ರತಿ ಗಂಟೆಗೆ 55 ಕಿ.ಮೀ.ವೇಗದಲ್ಲಿ ಬೀಸುವ ಬಿರುಗಾಳಿ ಕರಾವಳಿಯ ಉದ್ದಕ್ಕೂ ಮತ್ತು ಹೊರಗೆ ಮೇಲುಗೈ ಸಾಧಿಸುವ ಸಾಧಿಸಲಿದೆ. ದಣ ಕನ್ನಡದ ಮೂಲ್ಕಿಯಿಂದ ಮಂಗಳೂರಿನವರೆಗೆ, ಉತ್ತರ ಕನ್ನಡದ ಮಾಜಾಳಿಯಿಂದ ಭಟ್ಕಳವರೆಗೆ, ಉಡುಪಿಯ ಬೈಂದೂರಿನ ಕಾಪುವರೆಗೆ ಹೈ ವೇವ್ ವಾಚ್ ಅರ್ಲಟ್ ನೀಡಲಾಗಿದೆ. ಸಮುದ್ರದಲ್ಲಿ 3 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಏಳಲಿವೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಹಾಸನ, ಕೊಡಗಿನಲ್ಲಿ ಮುಂದಿನ 4 ದಿನ ಆರೆಂಜ್ ಅರ್ಲಟ್ ಇದ್ದರೆ, ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ಯಾದಗಿರಿ, ಚಾಮರಾಜನಗರ, ಮೈಸೂರಿನಲ್ಲಿ ಮುಂದಿನ 72 ಗಂಟೆ ಜೋರಾಗಿ ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅರ್ಲಟ್ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ವರ್ಷಧಾರೆಯಾಗಲಿದೆ.