ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ಹಲವು ಕಡೆಗಳಲ್ಲಿ ಮಧ್ಯಾಹ್ನದ ಬಳಿಕ ದಿಢೀರ್ ಮಳೆ ಸುರಿದೆ, ದೇವನಹಳ್ಳಿಯಲ್ಲಿ ಸುಮಾರು 2 ಗಂಟೆ ಕಾಲ ಜೋರು ಮಳೆಯಾಗಿದ್ದರೆ, ಹೊಸಕೋಟೆ, ದೊಡ್ಡಬಳ್ಳಾಪುರ ಭಾಗದಲ್ಲಿ ತುಂತುರು ಮಳೆಯೊಂದಿಗೆ ಅರ್ಧ ತಾಸು ಸಾಧಾರಣ ಮಳೆಯಾಗಿದೆ. ಮಳೆ ಆರಂಭದಲ್ಲಿಯೇ ಜೋರು ಬಿರುಗಾಳಿ ಬೀಸಿದೆ, ಮುಂಜಾನೆಯಿಂದಲೇ ಮೋಡ ಮುಸುಕಿದಂತ ವಾತಾವರಣವಿದ್ದು, ಬಿರುಬೇಸಿಗೆಯಲ್ಲಿಯೂ ತಂಪಿನ ವಾತಾವರಣ ಸೃಷ್ಟಿಯಾಗಿತ್ತು. ಶುಕ್ರವಾರ ಹಾಗೂ ಶನಿವಾರವೂ ಗ್ರಾಮಾಂತರ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಮುಂದಿನ 5 ದಿನಗಳಲ್ಲಿ ತಾಪಮಾನ ಗರಿಷ್ಟ 3ರಿಂದ 4 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಲಿದೆ ಎಂದು ಅಂದಾಜಿಲಾಗಿದೆ. ಬಿರುಬಿಸಿಲಿಗೆ ಕಾದ ಕಾವಲಿಯಂತಾಗಿದ್ದ ಜಿಲ್ಲೆಯಲ್ಲಿ ಮಳೆರಾಯ ತಂಪಿನ ವಾತಾವರಣಕ್ಕೆ ಕಾರಣವಾಗಿದ್ದಾನೆ.
ದೇವನಹಳ್ಳಿಯಲ್ಲಿ ಜನರ ಪರದಾಟ:
ದೇವನಹಳ್ಳಿ: ತಾಲೂಕಿನ ಸುತ್ತಮುತ್ತ ಗುರುವಾರ ಮಧ್ಯಾಹ್ನ ಒಂದರಿಂದ ಎರಡು ಗಂಟೆವರೆಗೂ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶಗಳು, ರೈಲ್ವೆ ಅಂಡರ್‌ಪಾಸ್‌ಗಳು ಕೆರೆಯಂತಾಗಿ ವಾಹನ ಸವಾರರು ಪರದಾಡುವಂತಾಯಿತು.
ಮೊದಲೇ ಗುಂಡಿಗಳಾಗಿದ್ದ ರಸ್ತೆಗಳು ನೀರು ತುಂಬಿಕೊಂಡಿದ್ದು, ಸಂಚಾರ ದಟ್ಟಣೆ ಉಂಟಾಗಿ ಪೊಲೀಸರು ಸುಗಮ ಸಂಚಾರಕ್ಕೆ ಪ್ರಮುಖ ವೃತಗಳಲ್ಲಿ ಮಳೆಯಲ್ಲಿಯೇ ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂತು. ಬಹುತೇಕ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದು, ರಾಜಕಾಲುವೆ, ಚರಂಡಿಗಳು ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆ ಹಳೆ ಬಸ್, ಹೊಸಬಸ್ ನಿಲ್ದಾಣ, ಕೆಂಪೇಗೌಡ ವೃತ್ತ ಸೇರಿ ಹಲವು ಕಡೆ ರಸ್ತೆಯೇ ಕಾಣದಂತಾಗಿತ್ತು. ಇನ್ನೂ ಹಕ್ಕುಪೇಟೆ, ನೀರಗಂಟಿಪಾಳ್ಯ, ಡಾಬಾ ಗೇಟ್ ಐವಿಸಿ ರಸ್ತೆಯ ಹಾಗೂ ಯರ್ತಿಗಾನಹಳ್ಳಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ರೈಲ್ವೇ ಅಂಡರ್‌ಪಾಸ್‌ಗಳಲ್ಲಿ ನಾಲ್ಕೈದು ಅಡಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.