ಜಿಲ್ಲೆ

ಮುಂಗಾರುಪೂರ್ವ ಮಳೆ ಬಿರುಸು, ಮುನ್ನೆಚ್ಚರಿಕಾ ಕ್ರಮ ಆಗ್ರಹ, ಅಧಿಕಾರಿಗಳಿಗೆ ನಿರ್ದೇಶನ ಅಗತ್ಯ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೈಂದೂರು

ಮುಂಗಾರುಪೂರ್ವ ಮಳೆ ಬಿರುಸಾಗಿದ್ದು, ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶ ಮಾಡುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುಂಗಾರುಪೂರ್ವ ಮಳೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಸಿಡಿಲಾಘಾತದಿಂದ ಜೀವ ಹಾನಿ ಹಾಗೂ ಬಿರುಗಾಳಿಯಿಂದ ವಾಸ್ತವ್ಯದ ಮನೆ ಸೇರಿ ಅಪಾರ ಸಾರ್ವಜನಿಕ ಆಸ್ತಿ ಹಾನಿಯಾಗಿದೆ. ಪ್ರಸ್ತುತ ಬೈಂದೂರು ಪಪಂ ವ್ಯಾಪ್ತಿಯಲ್ಲಿ ಕೃಷಿ ಜಮೀನುಗಳಿಗೆ ಹಾಗೂ ಮನೆ ಅಂಗಳಕ್ಕೆ ನೀರು ನುಗ್ಗಿದೆ. ಸ್ಥಳೀಯ ಅಧಿಕಾರಿಗಳಿಗೆ ಈ ಬಗ್ಗೆ ನಿಗಾವಹಿಸಲು ಶಾಸಕರು ವಿಶೇಷ ಸೂಚನೆ ನೀಡಿದ್ದಾರೆ. ಚುನಾವಣೆ ನೀತಿ ಸಂಹಿತೆ

ಜಾರಿಯಲ್ಲಿರುವುದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಲು ಸಾಧ್ಯವಿಲ್ಲ. ಹೀಗಾಗಿ ಅಧಿಕಾರಿಗಳೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಜಿಲ್ಲಾಧಿಕಾರಿ ಸ್ಥಳೀಯ ಅಧಿಕಾರಿಗಳಿಗೆ ಮಳೆಗಾಲದ ಸಿದ್ಧತೆಗೆ ಅಗತ್ಯ ನಿರ್ದೇಶನ ನೀಡಬೇಕು ಎಂಬುದು ಈ ಭಾಗದ ಜನರ ಒತ್ತಾಯ.
ಎಲ್ಲ ಹಂತದ ಅಧಿಕಾರಿ ವರ್ಗ ಸೇರಿದಂತೆ ಜಿಲ್ಲಾಡಳಿತ ಈಗಾಗಲೇ ಪ್ರಾಕೃತಿಕ ವಿಕೋಪದಿಂದ ಹಾನಿ ಸಂಭವಿಸಿದ ಪ್ರಕರಣಗಳಿಗೆ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೆ ತುರ್ತು ಪರಿಹಾರ ಒದಗಿಸಲು ಕ್ರಮ ವಹಿಸಬೇಕು. ಕೃತಕ ನೆರೆ ಉಂಟಾಗದಂತೆ ಪ್ರಮುಖ ಕಾಲುವೆ, ತೋಡುಗಳ ಹೂಳೆತ್ತಲು ಅಗತ್ಯ ಕ್ರಮ ವಹಿಸಬೇಕು. ತಾಲೂಕು ಆಡಳಿತ ಸ್ಥಳೀಯಾಡಳಿತ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಮಳೆಗಾಲದ ಅನಾಹುತ ತಡೆಗಟ್ಟುವ ನಿಟ್ಟಿನಲ್ಲಿ ಪೂರಕ ರಕ್ಷಣಾ ತಂಡ ರಚಿಸಿ ಈಗಿನಿಂದಲೇ ಕಾರ್ಯಯೋನ್ಮುಖವಾಗಬೇಕು ಎಂಬುದು ಕ್ಷೇತ್ರದ ಜನತೆಯ ಒತ್ತಾಸೆ.

ಮಳೆಹಾನಿ ಪ್ರದೇಶಗಳಿಗೆ ಈಗಾಗಲೇ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಲಾಗಿದೆ. ತುರ್ತು ಪರಿಹಾರ ಕ್ರಮ ಕೈಗೊಳ್ಳಲು ಹಾಗೂ ಮಳೆಗಾಲದಲ್ಲಿ ಉಂಟಾಗಬಹುದಾದ ಸಂಭಾವ್ಯ ಅನಾಹುತ ತಪ್ಪಿಸಲು ಬೇಕಾದ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದನ್ನು ತಕ್ಷಣದಿಂದಲೇ ಪಾಲಿಸಿ ಜಾರಿಗೆ ತರಬೇಕಾದ ತುರ್ತು ಅಗತ್ಯವಿದೆ.-ಗುರುರಾಜ್ ಗಂಟಿಹೊಳೆ, ಶಾಸಕ