ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ
ಕರಾವಳಿಯಲ್ಲಿ ಶುಕ್ರವಾರ ಮಧ್ಯಾಹ್ನವರೆಗೆ ಬಿಸಿಲಿನ ವಾತಾವರಣವಿದ್ದು, ಬಳಿಕ ಮುಂಗಾರು ತುಸು ಬಿರುಸುಗೊಂಡಿದೆ. ದ.ಕ., ಹಾಗೂ ಉಡುಪಿ ಜಿಲ್ಲಾದ್ಯಂತ ಆಗಾಗ ಭಾರಿ ಮಳೆ ಸುರಿದಿದೆ. ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಸಂಭವವಿದ್ದು, ದ.ಕ.ದಲ್ಲಿ ಜುಲೈ 13ರಂದು ಆರೆಂಜ್ ಅಲರ್ಟ್, ಜುಲೈ 14 ಹಾಗೂ 15ರಂದು ರೆಡ್ ಅಲರ್ಟ್ ಘೋಷಿಸಿದೆ. ಉಡುಪಿಯಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿದೆ.
ಉಭಯ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ಕ್ಷೀಣವಾಗಿತ್ತು. ಶುಕ್ರವಾರ ಮಧ್ಯಾಹ್ನವರೆಗೆ ಬಿಸಿಲು ಸಹಿತ ಮೋಡ, ಅಲ್ಲಲ್ಲಿ ತುಂತುರು ಹನಿ ಕಂಡುಬಂದರೆ, ಮಧ್ಯಾಹ್ನ ನಂತರ ಎಲ್ಲೆಡೆ ಪೂರ್ಣ ಪ್ರಮಾಣದ ಮೋಡಕವಿದ ವಾತಾವರಣ ಇತ್ತು. ಸಂಜೆಯಾಗುತ್ತಿದ್ದಂತೆ ಮಂಗಳೂರು, ಕೊಣಾಜೆ, ಸುರತ್ಕಲ್ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಗುಡುಗು ಸಹಿತ ಮಳೆ ಸುರಿಯಲಾರಂಭಿಸಿದೆ. ಕರಾವಳಿ ಜಿಲ್ಲೆಗಳಾದ್ಯಂತ ಮುಂದಿನ 4 ದಿನ ಸಾಧಾರಣ ಉತ್ತಮ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ರಾಜ್ಯದ ಮಲೆನಾಡು ಭಾಗಗಳಲ್ಲಿ ಹಾಗೂ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಜುಲೈ 16ರಿಂದ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗುವ ಲಕ್ಷಣಗಳಿವೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಗುಲಾಬಿ, ಕುಂದಾಪುರ ತಾಲೂಕಿನ ಕೆಂಚನೂರು ಗ್ರಾಮದ ಹೂವಮ್ಮ ಪೂಜಾರಿ ಅವರ ಮನೆಗೆ ಭಾಗಶಃ ಹಾನಿಯಾಗಿದೆ. ಕುಂದಾಪುರ ತಾಲೂಕಿನ ಉಳ್ಳೂರು ಗ್ರಾಮದ ಹೆರಯಣ್ಣ ಶೆಟ್ಟಿ ಹಾಗೂ ರಟ್ಟಾಡಿ ಗ್ರಾಮದ ಅಕ್ಕಯ್ಯ ಪೂಜಾರ್ತಿಯವರ ತೋಟಗಾರಿಕಾ ಬೆಳೆ ಮಳೆಯಿಂದ ಹಾನಿಯಾಗಿದೆ.
ಕರಾವಳಿಯಲ್ಲಿ ಗಂಟೆಗೆ 40 ಕಿ.ಮೀ.ನಿಂದ 48 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ. ಮುಂದಿನ 1-2 ದಿನಗಳಲ್ಲಿ ಕರಾವಳಿಯಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಂಭವವಿದ್ದು, ಸಂಭವಿಸಬಹುದಾದ ಹಾನಿ ತಪ್ಪಿಸಲು ಎನ್‌ಡಿಆರ್‌ಎಫ್ ತಂಡ 24X7 ರೀತಿಯಲ್ಲಿ ಸನ್ನದ್ಧವಾಗಿದೆ.