ಮಹಾಲಿಂಗಪುರದ ವಡಗೇರಿ ಪ್ಲಾಟ್‌ನಲ್ಲಿ ಇರುವ ನಾಗಪ್ಪ ದೇವಸ್ಥಾನದ ಬಳಿ ಬೃಹತ್ ಮರ ಬಿದ್ದು ಮಂಜುನಾಥ ಅರಳಿಕಟ್ಟಿ ಅವರ ಕಾರು ಹಾಗೂ ಮಂಜುನಾಥ ಹುಂಡೇಕಾರ ಅವರ ಓಮಿನಿ ಜಖಂಗೊಂಡಿರುವುದು. 
ಜಿಲ್ಲೆ

ಗಾಳಿ ಮಳೆಗೆ ಅಪಾರ ಹಾನಿ

ವಿನಯ ಆಶೋಕ ನಾಯ್ಕ

ಮಹಾಲಿಂಗಪುರ: ಪಟ್ಟಣದಲ್ಲಿ ಶನಿವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಮನೆಯೊಂದರ ಪತ್ರಾಸ್ ಹಾರಿ ಹೋಗಿ ಸಮೀಪದ ಎರಡು ಮನೆಗಳು ಹಾಗೂ ಒಂದು ಟಿವಿಎಸ್ ಎಕ್ಸೆಲ್ ಗಾಡಿ ಬಿದ್ದು ಹಾನಿಯುಂಟಾಗಿದೆ.

ಸ್ಥಳೀಯ ವಡಗೇರಿ ಪ್ಲಾಟ್‌ನಲ್ಲಿನ ನಾಗಪ್ಪ ದೇವಸ್ಥಾನದ ಬಳಿ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ಮಂಜುನಾಥ ಅರಳಿಕಟ್ಟಿ ಎಂಬುವರ ಕಾರು ಹಾಗೂ ಮಂಜುನಾಥ ಹುಂಡೇಕಾರ ಅವರ ಓಮಿನಿ ಜಖಂಗೊಂಡಿವೆ.

ಆಯಿಲ್ ಮಿಲ್ ಪ್ಲಾಟ್‌ನಲ್ಲಿರುವ ನೇಕಾರ ನಾಗಪ್ಪ ಯಾದವಾಡ ಅವರ ಮನೆಯ ಮೇಲಿನ ಪತ್ರಾಸ್‌ಗಳು, ನೀರಿನ ಟ್ಯಾಂಕ್ ಮತ್ತು ಮೇಲ್ಚಾವಣಿ ತಡೆಗೋಡೆ ಸಹಿತ ಬಿರುಗಾಳಿಗೆ ಹಾರಿಹೋಗಿ ಪಕ್ಕದ ಈರಪ್ಪ ನಾಗರಾಳ ಹಾಗೂ ಬಸವರಾಜ ನಾಗರಾಳ ಅವರ ಮನೆಗಳ ಮೇಲೆ ಬಿದ್ದಿವೆ. ಇದರಿಂದ ಈರಪ್ಪ ನಾಗರಾಳ ಅವರ ಮನೆಯ ಪತ್ರಾಸ್, ಮೇಲಿನ ಮನೆಯ ಬಾಗಿಲು ಹಾಗೂ ಗೋಡೆ ಜಖಂಗೊಂಡಿದೆ.

ಬಸವರಾಜ ನಾಗರಾಳ ಅವರ ಮಗ್ಗದ ಮೇಲಿನ ಪತ್ರಾಸ್ ಜಖಂಗೊಂಡು ನೀರು ಸೋರಿ ಕೈಮಗ್ಗದ ಪರಿಕರಗಳು ಮತ್ತು ಮಗ್ಗಕ್ಕೆ ಹಾನಿಯುಂಟಾಗಿದೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಬಸವರಾಜ ನಾಗರಾಳ ಎರಡು ಮನೆಗಳಿಂದ ಸುಮಾರು 2.50 ಲಕ್ಷ ರೂ. ಹಾನಿಯುಂಟಾಗಿದೆ ಎಂದು ತಿಳಿಸಿದ್ದಾರೆ.

ಈ ಎಲ್ಲ ಅವಘಡಗಳ ನಡುವೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಪಟ್ಟಣದಲ್ಲಿ ಇಷ್ಟು ಜೋರಾಗಿ ಮಳೆಯಾಗಿದ್ದರೂ ಶಾಂತಿನಿಕೇತನ ಕಾಲನಿ, ಶ್ರೀ ದಾನಮ್ಮದೇವಿ ನಗರ ಹಾಗೂ ಅಯೋಧ್ಯ ನಗರಗಳಲ್ಲಿ ಮಾತ್ರ ಸಾಧಾರಣ ಮಳೆಯಾಗಿದೆ.