ಜಿಲ್ಲೆ

ಸುಡುಬಿಸಿಲಿನಿಂದ ಹೆಚ್ಚಾದ ಪ್ರಾಣಿಗಳ ಉಪಟಳ

ಎನ್.ವೆಂಕಟೇಶ್

ನೀರು, ಆಹಾರ ಅರಸಿ ಜನವಸತಿಯತ್ತ ಲಗ್ಗೆ

ಚಿಕ್ಕಬಳ್ಳಾಪುರ: ಬೇಸಿಗೆಯ ಬಿಸಿಲಿನ ತಾಪಮಾನ ದಿನೇ ದಿನೆ ಹೆಚ್ಚಾಗುತ್ತಿರುವುದರ ನಡುವೆ ಮನೆಗಳಿಗೆ ಇಲಿ, ಹೆಗ್ಗಣ, ಹಾವು, ಕೋತಿ ಸೇರಿದಂತೆ ಮೂಕ ಜೀವಿಗಳು ಲಗ್ಗೆಯಿಡುತ್ತಿದ್ದು, ಸ್ಥಳೀಯರಿಗೆ ದೊಡ್ಡ ತಲೆ ನೋವಾಗಿ ಪರಿಣಿಮಿಸಿದೆ.

ಹೌದು..! ವಿವಿಧ ಬಡಾವಣೆಯ ಖಾಲಿ ನಿವೇಶನಗಳಲ್ಲಿನ ಗಿಡಗಳು, ಸಮೀಪದ ತೋಟಗಳಿಂದ ಬರುತ್ತಿರುವ ಕ್ರಿಮಿ ಕೀಟಗಳ ಹಾವಳಿ ಜಾಸ್ತಿಯಾಗಿದೆ. ಇದರಿಂದಾಗಿ ಒಂದೆಡೆ ಜನರು ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚಳವಾಗತೊಡಗಿದೆ. ಪ್ರಸ್ತುತ 31 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಸೆಕೆ, ಬಾಯಾರಿಕೆ, ನಿತ್ರಾಣ, ತಲೆ ನೋವು ಸೇರಿ ವಿವಿಧ ಸಮಸ್ಯೆಗಳು ಭಾದಿಸುತ್ತಿವೆ. ಮುಂಬರುವ ದಿನಗಳಲ್ಲಿ ಉಷ್ಣಾಂಶ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಹಾವುಗಳ ಸಮಸ್ಯೆ ಹೆಚ್ಚು

ಪ್ರಮುಖವಾಗಿ ಹಾವುಗಳ ಸಮಸ್ಯೆಯೇ ದೊಡ್ಡ ತಲೆ ನೋವಾಗಿದೆ. ಇವುಗಳು ಪೊಟರೆ, ಗಿಡಗಳು, ಬಿಲ, ಹುತ್ತಗಳ ಬದಲು ಮನೆಯಲ್ಲಿ ರಕ್ಷಣಾತ್ಮಕ ಆಶ್ರಯ ಪಡೆದುಕೊಳ್ಳುವಂತಹುದು ಅನಾಹುತಗಳಿಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ 85ಕ್ಕೂ ಹೆಚ್ಚು ಹಾವು ಕಡಿತ ಪ್ರಕರಣಗಳು ವರದಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹಾವುಗಳನ್ನು ಹಿಡಿಯಲು ಉರುಗ ತಜ್ಞರಿಗೆ ಸ್ಥಳೀಯರು ಮಾಹಿತಿ ನೀಡುವುದು, ಹಾಗೆಯೇ ಸಿಕ್ಕಿದ ಹಾವುಗಳನ್ನು ಕಾಡಿನಲ್ಲಿ ಸುರಕ್ಷಿತವಾಗಿ ಬಿಡುವುದೂ ಹೆಚ್ಚಾಗಿದೆ.

ವಾನರರಿಂದ ತಲೆನೋವು

ಬಿಸಿಲಿನ ತಾಪ, ನೀರಿನ ಹಾಹಾಕಾರಕ್ಕೆ ಮರಿಗಳೊಂದಿಗೆ ಕೋತಿಗಳು ನಗರ, ಪಟ್ಟಣ ಪ್ರದೇಶಗಳತ್ತ ಬರುತ್ತಿವೆ. ಮನೆಯೊಳಗೆ ನುಗ್ಗಿ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಪರಾರಿಯಾಗುವ, ಒಣಗಿದ ಬಟ್ಟೆಗಳನ್ನು ಕಿತ್ತು ಹಾಕುವ ಇಲ್ಲವೇ ಎದುರಿಗೆ ಕಂಡವರ ಮೇಲೆ ದಾಳಿ ನಡೆಸುವಂತಹುದಾಗುತ್ತಿದೆ. ಅದರಲ್ಲೂ ನಲ್ಲಿ ನೀರು ಕುಡಿಯಲು ಮುಗಿ ಬೀಳುವ ದೃಶ್ಯಗಳು ಸಾಮಾನ್ಯವಾಗಿವೆ.

ಸಂಘರ್ಷಕ್ಕೆ ಕಾರಣ

ಕಾಡಿನಲ್ಲಿದ್ದ ಕೋತಿ, ಕಾಡು ಹಂದಿ, ನರಿ, ತೋಳ, ಮುಳ್ಳು ಹಂದಿ, ಕಡವೆ, ಜಿಂಕೆ, ನವಿಲು, ಮುಂಗುಸಿ, ಚಿರತೆ ಸೇರಿದಂತೆ ಇತರ ಪ್ರಾಣಿಗಳು ನೀರನ್ನು ಹುಡುಕಿಕೊಂಡು ಬರುತ್ತಿವೆ. ಇದು ಮನುಷ್ಯರು ಮತ್ತು ಮೂಕಜೀವಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿವೆ. ಜಿಂಕೆಗಳು ಬೀದಿನಾಯಿಗಳಿಗೆ, ಇತರ ಪ್ರಾಣಿಗಳು ಅರಣ್ಯ ಪ್ರದೇಶದ ನಡುವಿನ ರಸ್ತೆಗಳಲ್ಲಿ ಹಾದು ಹೋಗುವ ವಾಹನಗಳಿಗೆ ಬಲಿಯಾಗುತ್ತಿವೆ. ಬೆಳೆ ಹಾಳು ಮಾಡುವ ಭಯದಲ್ಲಿ ಅನೇಕರು ಹೊಡೆದು ಓಡಿಸಲು ಯತ್ನಿಸುತ್ತಿದ್ದಾರೆ.

ಕಾಡ್ಗಿಚ್ಚು ಪ್ರಕರಣಗಳು

ಇತ್ತೀಚೆಗೆ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕವಾಗಿ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದೆ. ಇದರಿಂದ ಕಾಡು ಪ್ರಾಣಿಗಳು ಅರಣ್ಯ ಪ್ರದೇಶವನ್ನು ಬಿಟ್ಟು ಹೊರಗಡೆ ಬರುತ್ತಿದ್ದು, ಆಹಾರ ಮತ್ತು ನೀರಿಗಾಗಿ ತೀವ್ರ ಸಮಸ್ಯೆ ಅನುಭವಿಸುತ್ತಿವೆ.

ಅರಣ್ಯ ಪ್ರದೇಶದ ವಿವಿಧ ಭಾಗಗಳಲ್ಲಿಟ್ಟಿರುವ ಸಿಮೆಂಟ್ ತೊಟ್ಟಿಗಳಿಗೆ ನೀರುಣಿಸುವ ಕೆಲಸ ಚುರುಕಾಗಬೇಕಾಗಿದೆ. ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು ರಸ್ತೆ ಮಾರ್ಗವಾಗಿ ಸಿಗುವ ಕಣಿವೆ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕೆಲಸವಾಗುತ್ತಿದೆ. ಕಾರ್ಮಿಕರ ಕೆಲಸದ ನಡುವೆ ಮಣ್ಣು, ಧೂಳು ಸೇರಿ ಇತರ ಕಾರಣಗಳಿಗೆ ಅನೇಕ ನೀರಿನ ತೊಟ್ಟಿಗಳು ಗಲೀಜಾಗಿವೆ. ಮನುಷ್ಯರು ಸ್ವಯಂ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಮೂಕ ಜೀವಿಗಳ ಬಗ್ಗೆಯೂ ಕಾಳಜಿ ತೋರಬೇಕಾಗಿದೆ. ಬೇಸಿಗೆ ಇರುವವರೆಗೂ ಜನರು ಮಾಳಿಗೆ ಮೇಲೆ ಅಥವಾ ಆವರಣದಲ್ಲಿ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರು, ತಿನ್ನಲು ಆಹಾರವನ್ನಿಡಬೇಕು. ಇದರಿಂದ ಮೂಕಜೀವಿಗಳ ರೋದನ ತಪ್ಪುತ್ತದೆ. ಒಳ್ಳೆಯ ಕೆಲಸ ಮಾಡಿದ ತೃಪ್ತಿಯೂ ಸಿಗುತ್ತದೆ ಎಂಬುದಾಗಿ ಪರಿಸರ ಪ್ರೇಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.