ಸಾಗರ: ಹಿರಿಯ ನ್ಯಾಯವಾದಿ ಕೆ.ಟಿ.ಶೆಟ್ಟಿ ಅವರ ಬದುಕು ಕಿರಿಯರಿಗೆ ಮಾರ್ಗದರ್ಶಕ. ಅವರ ಶಿಸ್ತು, ಬದ್ಧತೆ, ಅಧ್ಯಯನ ಮಾದರಿ ಎಂದು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹೇಳಿದರು.
ನಗರದಲ್ಲಿ ಭಾನುವಾರ ಬಂಟರ ಯಾನೆ ನಾಡವರ ಸಂಘ ಏರ್ಪಡಿಸಿದ್ದ ಹಿರಿಯ ನ್ಯಾಯವಾದಿ ಕೆ.ಟಿ.ಶೆಟ್ಟಿ ದಂಪತಿ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕೆ.ಟಿ.ಶೆಟ್ಟಿ ಅವರು ವಕೀಲರಾಗಿ ಹಲವು ವರ್ಷಗಳ ಕಾಲ ಸಾಗರದ ಜನರಿಗೆ ಸೇವೆ ನೀಡಿದ್ದಾರೆ. ಅತ್ಯಂತ ಸರಳ ಮತ್ತು ಸಜ್ಜನಿಕೆ ನಡೆಯಿಂದ ಎಲ್ಲರ ಜತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು. ಸಂಘದ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ಸಂಘವನ್ನು ಗಟ್ಟಿಗೊಳಿಸುವ ಕೆಲಸ ಮಾಡಿದ್ದಾರೆ. ಇದೀಗ ಬೆಂಗಳೂರಿನಲ್ಲಿ ನೆಲಸಲಿರುವ ಕೆ.ಟಿ.ಶೆಟ್ಟಿ ಅವರ ಕೆಲಸವನ್ನು ಸ್ಮರಿಸಿಕೊಳ್ಳುವುದು ಸಂಘದ ಕರ್ತವ್ಯವಾಗಿದೆ. ಅವರ ಜೀವನ ಒಂದು ಸಾಧನೆಯ ಕೈಪಿಡಿ ಆಗಿದೆ ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ಟಿ.ಬಿ.ಮಂಜುನಾಥ ಶೆಟ್ಟಿ ಮಾತನಾಡಿ, ನಾನು ಮತ್ತು ಕೆ.ಟಿ.ಶೆಟ್ಟಿ ಸಹದ್ಯೋಗಿಗಳಾಗಿದ್ದು ನ್ಯಾಯಲಯದಲ್ಲಿ ಒಟ್ಟಿಗೆ ಕೆಲಸ ಮಾಡುವ ಜತೆಗೆ ಸಂಘದ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದ್ದೆವು ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ.ಟಿ.ಶೆಟ್ಟಿ, ಕಳೆದ ಐವತ್ತು ವರ್ಷಗಳಿಂದ ನಾನು ಸಾಗರದಲ್ಲಿ ನೆಲೆಸಿದ್ದೆ. ಊರಿನ ಜನರು ನನಗೆ ಎಲ್ಲ ಹಂತದಲ್ಲೂ ಸಹಕಾರ ನೀಡಿದ್ದಾರೆ. ಅವರ ಸಹಕಾರವನ್ನು ಮರೆಯುವುದಿಲ್ಲ. ನಾನು ಎಲ್ಲೆ ಇದ್ದರೂ ಸಾಗರದ ಜನರ ಪ್ರೀತಿ-ವಿಶ್ವಾಸ ಮರೆಯುವುದಿಲ್ಲ ಎಂದರು.
ಜಯಶೀಲ ಶೆಟ್ಟಿ, ಗೋಪಾಲ ಶೆಟ್ಟಿ, ರಘುಪತಿ ಶೆಟ್ಟಿ, ಪ್ರಕಾಶ್ ಶೆಟ್ಟಿ, ಅಣ್ಣಪ್ಪ ಶೆಟ್ಟಿ, ಸುನೀಲ್ ಶೆಟ್ಟಿ, ಪುಷ್ಪಾ ಶೆಟ್ಟಿ ಇತರರಿದ್ದರು.