ಜಿಲ್ಲೆ

ಹೃದಯಾಘಾತದ ಭೀತಿ : ಮೈಸೂರಿನ ಜಯದೇವ ಆಸ್ಪತ್ರೆಗೆ ಜನರ ಪ್ರವಾಹ

ಮೈಸೂರು: ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ನಗರದ ಜಯದೇವ ಆಸ್ಪತ್ರೆಗೆ ತಪಾಸಣೆಗೆ ನಿರೀಕ್ಷೆಗೂ ಮೀರಿ ಜನರು ಆಗಮಿಸುತ್ತಿದ್ದಾರೆ.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಬೆಳಗ್ಗಿನಿಂದಲೆ ಓಪಿಡಿ ವಿಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಸೇರುತ್ತಿರುವುದು ಕಂಡು ಬರುತ್ತಿದೆ. ದೇವಸ್ಥಾನದ ಮುಂದೆ ದರ್ಶನಕ್ಕೆ ನಿಂತಂತೆ ಜನರು ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಗುಂಪುಗೂಡಿದ್ದಾರೆ.

ಜನರನ್ನು ನಿಯಂತ್ರಣ ಮಾಡಲಾಗದೇ ಬ್ಯಾರಿಕೇಡ್ ಸಿಸ್ಟಮ್ ಮಾಡಲಾಗಿದೆ. ಸರತಿ ಸಾಲಲ್ಲಿ ನಿಂತಿರುವ ರೋಗಿಗಳಲ್ಲಿ ಯುವಕ, ಯುವತಿಯರ ಸಂಖ್ಯೆಯೇ ಹೆಚ್ಚು ಇದೆ. ಪ್ರತಿನಿತ್ಯ 500ರಷ್ಟು ಬರುತ್ತಿದ್ದ ರೋಗಿಗಳ ಸಂಖ್ಯೆ ದಿಢೀರ್ ಆಗಿ 1,000ವರೆಗೆ ಏರಿಕೆಯಾಗಿದೆ. ಬಂದಿರುವ ರೋಗಿಗಳಲ್ಲಿ ಮೊದಲ ಬಾರಿ ಬಂದಿರುವವರ ಸಂಖ್ಯೆಯೇ ಅಧಿಕವಾಗಿದೆ. ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಾದ ಹಿನ್ನೆಲೆ ಭಯದಿಂದ ಹಲವಾರು ಜನರು ತಪಾಸಣೆಗೆ ಆಗಮಿಸುತ್ತಿದ್ದಾರೆ. ಹಾಸನ ಜಿಲ್ಲೆಯಿಂದ ಸುಮಾರು 300ಕ್ಕೂ ಹೆಚ್ಚು ರೋಗಿಗಳು ಬರುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥ ಡಾ. ಸದಾನಂದ್, ಆಸ್ಪತ್ರೆಗೆ ಬರುತ್ತಿರುವ ಯುವ ಸಮೂಹದಲ್ಲಿ ಹೆಚ್ಚಿನ ಜನರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಇತ್ತೀಚೆಗೆ ಆಸ್ಪತ್ರೆಗೆ ಬರುವ ಯುವಕ ಯುವತಿಯರಲ್ಲಿ ಒತ್ತಡ, ಒಬೇಸಿಟಿ ಸೇರಿದಂತೆ ಹಲವು ಲಕ್ಷಣಗಳನ್ನು ಕಾಣುತ್ತಿದ್ದೇವೆ. ಸಾವಿನ ಪ್ರಕರಣ ಕೇವಲ ಹಾಸನ ಜಿಲ್ಲೆಯಲ್ಲಿ ಮಾತ್ರವಲ್ಲ, ಬೇರೆ ಕಡೆಗಳಲ್ಲೂ ಆಗುತ್ತಿವೆ. ಹಿಂದೆ ನಟ ಪುನೀತ್ ರಾಜ್‌ಕುಮಾರ್ ಸಾವಿಗೀಡಾದ ಸಂದರ್ಭದಲ್ಲೂ ಎರಡು ತಿಂಗಳು ಇದೇ ರೀತಿಯ ಪರಿಸ್ಥಿತಿ ಇತ್ತು. ಹೆಚ್ಚು ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ವೈದ್ಯರ ಮೇಲೆ ಒತ್ತಡ ಇದೆ. ಜನರು ಅನಗತ್ಯ ಆತಂತಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.