ಜಿಲ್ಲೆ

ಯುವಜನತೆ ಬಲಿ ಪಡೆಯುತ್ತಿರುವ ದುಶ್ಚಟಗಳು

Davangere - Desk - Ganesh M K

ಚನ್ನಗಿರಿ: ದುಶ್ಚಟಗಳು ಅದೃಶ್ಯ ಕೊಲೆಗಾರನಾಗಿ ಯುವಜನತೆಯನ್ನು ಸೆಳೆದು ಅವರ ಜೀವ ಬಲಿ ತೆಗೆದುಕೊಳ್ಳುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಇಂತಹ ದುಶ್ಚಟ ಅರಿವು ಮೂಡಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಪನ್ಮೂಲ ವ್ಯಕ್ತಿ ಎಂ.ಯು. ಚನ್ನಬಸಪ್ಪ ತಿಳಿಸಿದರು.

ಇಲ್ಲಿನ ಸರ್ಕಾರಿ ಬಾಲಿಕಾ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮದ ಉದ್ಘಾಟಿಸಿ ಗುರುವಾರ ಮಾತನಾಡಿದರು.

ಜೀವನ ಸುಂದರವಾಗಿ ಕಟ್ಟಿಕೊಳ್ಳುವಂತ ವಯಸ್ಸಿನಲ್ಲಿ ಯುವಕ, ಯುವತಿಯರು ಸಿನಿಮಾ, ಟಿವಿಯಲ್ಲಿ ಬರುವಂತಹ ಪ್ಯಾಷನ್‌ಗಳಿಗೆ ಮಾರು ಹೋಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಅವರನ್ನು ನಂಬಿಕೊಂಡ ಕುಟುಂಬಗಳಿಗೆ ಹೊರೆಯಾಗುತ್ತಿದ್ದಾರೆ. ಇತ್ತೀಚೆಗೆ ವಿಶ್ವ ಅರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ 18ರಿಂದ 24 ವರ್ಷದವರೆಗಿನ ದುಶ್ಚಟಗಳಿಗೆ ಹೆಚ್ಚು ಮಕ್ಕಳು ಬಲಿಯಾಗುತ್ತಿದ್ದಾರೆ ಎಂಬ ವರದಿ ನೀಡಿದೆ ಎಂದರು.

ಮದ್ಯವನ್ನು ಮೊದಲು ನಾವು ಕುಡಿಯುತ್ತೇವೆ. ನಂತರ ಮದ್ಯ ನಮ್ಮನ್ನು ಕುಡಿಯುತ್ತದೆ. ಆದ್ದರಿಂದ ಸರ್ಕಾರಗಳು ಬಾರ್ ಮತ್ತು ರೆಸ್ಟೋರೆಂಟ್, ತಂಬಾಕು ಉತ್ಪನ್ನ ಮಾರಾಟ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು.

ಮಹಿಳಾ ರಕ್ಷಣಾ ವೇದಿಕೆ ಅಧ್ಯಕ್ಷೆ ಜ್ಯೋತಿ ಕೋರಿ, ಬಾಲಿಕಾ ಪ್ರೌಢಶಾಲೆ ಮುಖ್ಯಶಿಕ್ಷಕ ಬಸವರಾಜ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ದಿನೇಶ್, ಮೇಲ್ವಿಚಾರಕಿ ಶಾರದಾ, ಜನಜಾಗೃತಿ ವೇದಿಕೆ ಸದಸ್ಯ ಜಗದೀಶ್ ಇದ್ದರು.