ಜಿಲ್ಲೆ

ಉತ್ತಮ ಆಹಾರ ಪದ್ಧತಿಯಿಂದ ಆರೋಗ್ಯಯುತ ಜೀವನ

ಬ್ಯಾಡಗಿ: ಆಹಾರದಿಂದಲೇ ಎಲ್ಲ ರೋಗಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದ್ದು, ನಿತ್ಯಜೀವನದಲ್ಲಿ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡಲ್ಲಿ ಉತ್ತಮ ಆರೋಗ್ಯಯುತ ಜೀವನ ನಡೆಸಬಹುದಾಗಿದೆ ಎಂದು ಡಾ. ಶಂಕರರಾವ್ ಪೇಟ್ಕರ ತಿಳಿಸಿದರು.

ತಾಲೂಕಿನ ಅಂದಾನಿಕೊಪ್ಪ ಗ್ರಾಮದ ದೇವಸ್ಥಾನದಲ್ಲಿ ಅನುಗ್ರಹ ಆರ್ಗನೈಜೇಷನ್ ಹಾಗೂ ಮಹಿಳಾ ಸಂಘಗಳ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಮಹಿಳಾ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಪ್ರಸಕ್ತ ದಿನಗಳಲ್ಲಿ ಬಹುತೇಕರಲ್ಲಿ ಬಿಪಿ, ಶುಗರ್, ಅಲರ್ಜಿ, ಸುಸ್ತು ಇತ್ಯಾದಿ ಆರೋಗ್ಯ ಸಮಸ್ಯೆಗಳಿಂದ ಜೀವನದಲ್ಲಿ ನೆಮ್ಮದಿ ಕಳೆದುಕೊಡು ಆಸ್ಪತ್ರೆಗಳತ್ತ ಧಾವಿಸುತ್ತಿದ್ದಾರೆ. ಎಲ್ಲದಕ್ಕೂ ನಮ್ಮ ಆರೋಗ್ಯ ಜಾಗೃತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ದೇಹದಲ್ಲಿ ಕಾಬೋಹೈಡ್ರೇಟ್ ಕಡಿಮೆ ಮಾಡಿಕೊಳ್ಳದೆ ಹೋದರೆ, ದೈಹಿಕವಾಗಿ ಬೊಜ್ಜಿನ ಸಮಸ್ಯೆ ತೀವ್ರವಾಗಲಿದೆ. ಆಹಾರದಲ್ಲಿ ಬದಲಾವಣೆ ಮಾಡಿಕೊಂಡು ಆರೋಗ್ಯ ಉತ್ತಮ ಪಡಿಸಿಕೊಳ್ಳಬೇಕಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ರೋಗಗಳು ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಸಣ್ಣಪುಟ್ಟ ಸಮಸ್ಯೆಗಳಿಗೆ ನಿರ್ಲಕ್ಷ್ಯ ಮಾಡದೆ, ಪ್ರತಿಯೊಬ್ಬರೂ ವೈದ್ಯಕೀಯ ಸಲಹೆ ಪಡೆಯಬೇಕು. ಆಹಾರ ಪದ್ಧತಿಯಲ್ಲಿ ಯಾವುದನ್ನೂ ವರ್ಜಿಸಬೇಡಿ. ದೇಹಕ್ಕೆ ಅಗತ್ಯವಾಗಿರುವಷ್ಟು ಮಾತ್ರ ಸೇವನೆ ಮಾಡಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ಆಹಾರ ಸಿದ್ಧಪಡಿಸುವಾಗ ನಿಗಾವಹಿಸಬೇಕು. ಇದರಿಂದ ಕುಟುಂಬವೇ ಆರೋಗ್ಯವಂತರಾಗಲು ಸಾಧ್ಯ ಎಂದರು.

ಡಾ. ಅಂಬಿಕಾ ಪೇಟ್ಕರ್ ಮಾತನಾಡಿ, ಕುಟುಂಬದ ಆರೋಗ್ಯ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯ ಸ್ಥಾನ ಮುಂಚೂಣಿಯಲ್ಲಿದೆ. ಹದಿಹರೆಯದ ಹೆಣ್ಣುಮಕ್ಕಳು, ಮಹಿಳೆಯರು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಾವು ಜ್ಞಾನ ಪಡೆಯಲು ಯಾವುದೇ ಮುಜುಗರ ಪಡಬಾರದು. ಕೆಲವೊಮ್ಮೆ ವೈಯಕ್ತಿಕ ಸಮಸ್ಯೆಗಳಿದ್ದಲ್ಲಿ ವೈದ್ಯರ ಬಳಿ ತೆರಳಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಹಾಗೂ ಆರೋಗ್ಯ ಕಿಟ್ ವಿತರಿಸಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸೇವಾ ಪ್ರತಿನಿಧಿ ಶೋಭಾ ಎಂ., ಶೀತಲ್ ಬೇಕಲ್, ಸರೋಜಾ ಚರಂತಿಮಠ, ಆಶಾ ಕಾರ್ಯಕರ್ತೆ ಎನ್.ಎಂ. ಶೈಲಾ ಇದ್ದರು.