ಜಿಲ್ಲೆ

ಸಾಧನೆಯ ಛಲವಿದ್ದರೆ ಆರೋಗ್ಯಯುತ ಜೀವನ

ವಿಜಯವಾಣಿ ಸುದ್ದಿಜಾಲ ಧಾರವಾಡ

ಏನಾದರೂ ಸಾಧಿಸಬೇಕು ಎಂಬ ಛಲವಿದ್ದಾಗ ಮಾತ್ರ ಆರೋಗ್ಯವಾಗಿ ಇರಲು ಸಾಧ್ಯ. ಸೇವಾ ನಿವೃತ್ತಿ ಬಳಿಕವೂ ಸಾಕಷ್ಟು ಕೆಲಸ ಕಾರ್ಯಗಳ ಕಡೆಗೆ ಗಮನ ಹರಿಸಬೇಕು. ಅಂದಾಗಲೇ ನೆಮ್ಮದಿ ಜೀವನ ಸಾಗಲಿದೆ. ಸಾರ್ಥಕ ತೃಪ್ತಿಕರ ಜೀವನ ಎಲ್ಲರದ್ದಾಗಲಿ ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಅಭಿಪ್ರಾಯಪಟ್ಟರು.

ನಗರದ ಜೆಎಸ್​ಎಸ್​ನ ಸನ್ನಿಧಿ ಸಭಾಂಗಣದಲ್ಲಿ ಕಾಲೇಜಿನ ಹಳೇ ವಿದ್ಯಾರ್ಥಿಗಳ ವತಿಯಿಂದ ಏರ್ಪಡಿಸಿದ್ದ ಪುನರ್ಮಿಲನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಳೇ ನೆನಪುಗಳ ಜತೆಗೆ ಹೊಸ ಕನಸುಗಳೂ ಇರಬೇಕು. ಜೀವನದ ಹಲವು ಬದಲಾವಣೆಗಳಿಗಾಗಿ ಕನಸುಗಳನ್ನು ಹೊಂದಿರಬೇಕು. ಸದಾ ಚಟುವಟಿಕೆಯಿಂದ ಕೂಡಿದ್ದರೆ ಮನಸ್ಸು ಪ್ರಫುಲ್ಲವಾಗಿರಲಿದೆ. ಮನಸ್ಸು ರಚನಾತ್ಮಕ, ನಿರಂತರ ಹರಿಯುವ ನೀರಿನಂತೆ ಇರಬೇಕು. ಬದುಕಿಗಾಗಿ ಸಂಪಾದನೆ ಹೊರತು, ಸಂಪಾದನೆಗಾಗಿ ಬದುಕು ಬೇಡ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡರೆ ನೆಮ್ಮದಿ ಜೀವನ ಸಾಗಿಸಬಹುದು ಎಂದರು.

ಜೆಎಸ್​ಎಸ್​ ಐಟಿಐ ಪ್ರಾಚಾರ್ಯ ಮಹಾವೀರ ಉಪಾಧ್ಯೆ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳೇ ಸಂಸ್ಥೆಯ ಬಹು ದೊಡ್ಡ ಆಸ್ತಿ. ಅಂತಹ ಆಸ್ತಿಯನ್ನು ಜೆಎಸ್​ಎಸ್​ ಹೊಂದಿರುವುದು ಹೆಮ್ಮೆಯ ವಿಷಯ. ಜೆಎಸ್​ಎಸ್​ನಲ್ಲಿ ಕಲಿತ ಅನೇಕರು ಸಮಾಜದಲ್ಲಿ ಬಹು ದೊಡ್ಡ ವ್ಯಕ್ತಿಗಳಾಗಿರುವುದು ಸಂಸ್ಥೆಗೆ ಸಂತಸದ ಸಂಗತಿ ಎಂದರು.

ಕಾಲೇಜಿನ ವಿಜ್ಞಾನ, ಕಲೆ ಹಾಗೂ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಿಗೆ ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು. ಸೂರಜ್​ ಜೈನ್​, ನಾಗರಾಜ ದೇಸಾಯಿ, ವಾದಿರಾಜ ನಾಗನೂರ, ಅರವಿಂದ ಜಮಖಂಡಿ, ರವಿ ಬಾಂಡಗೆ, ಸಂದೀಪ ಚಿಲಕವಾಡ, ವಿನೋದ ಹೆಗ್ಗಳಗಿ, ವಿಜಯ ಇನಾಮದಾರ, ಜಿತೇಂದ್ರ ನಾಡಗೇರ, ಶ್ರೀಕಾಂತ ಬೆಟಗೇರಿ, ರವಿ ಕಗ್ಗಣ್ಣವರ, ಗಂಗಾಧರ ಎಚ್​.ಕೆ., ಮೃಣಾಲ ಜೋಶಿ, ಭಾರತಿ ಆರ್​.ಕೆ., ಇತರರು ಇದ್ದರು.

ಪುನಮಿರ್ಲನ ಸಮಿತಿ ಕಾರ್ಯದರ್ಶಿ ಶ್ಯಾಮ ಮಲ್ಲನಗೌಡರ ಸ್ವಾಗತಿಸಿದರು. ಅಧ್ಯಕ್ಷ ನರಸಿಂಹರಾವ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಹಳೇ ವಿದ್ಯಾರ್ಥಿಗಳು ಕ್ಯಾಂಪಸ್​ ರೌಂಡ್​ ನಡೆಸಿ ಹಳೇ ನೆನಪುಗಳನ್ನು ಮೆಲಕು ಹಾಕಿದರು. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.