ಕೂಡ್ಲಿಗಿ: ಕಾಯಕ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ಪರಂಪರೆ ಶರಣರಿಗೆ ಇದೆ ಎಂದು ಗುಡೇಕೋಟೆ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಟಿ.ಎಚ್.ಎಂ.ಶೇಖರಯ್ಯ ಹೇಳಿದರು.
ಪಟ್ಟಣದ ಜ್ಞಾನಭಾರತಿ ಬಿ.ಇಡಿ ಕಾಲೇಜಿನಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಹಪಂಕ್ತಿ ಭೋಜನದ ಮೂಲಕ ಜಾತ್ಯತೀತ ತತ್ವವನ್ನು ಜನರಿಗೆ ತಲುಪಿಸುವಲ್ಲಿ 12ನೇ ಶತಮಾನದಲ್ಲಿ ಬಸವಾದಿ ಶರಣರು ಪ್ರಾರಂಭಿಸಿದ ಚಳವಳಿ ಇಂದಿಗೂ ಪ್ರಸ್ತುತವಾಗಿದೆ ಎಂದರು.
ಸಮಾಜದ ಭದ್ರತೆ ತಳಹದಿಯ ಮೇಲೆ ಶರಣ ಸಾಹಿತ್ಯ ನಿಂತಿದೆ. ಆರೋಗ್ಯಕರ ಸಮಾಜ ನಿರ್ಮಿಸಲು ವಚನಗಳು ದಾರಿದೀಪವಾಗಿವೆ. ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಸಮ ಸಮಾಜ ನಿರ್ಮಿಸಲು ಶರಣ ಸಾಹಿತ್ಯದ ಮೂಲಕ ಸಾಧ್ಯ. ಎಲ್ಲ ಜಾತಿಗಳಿಗೂ ಸಮಾನ ಸ್ಥಾನ ಕಲ್ಪಿಸಿಕೊಟ್ಟ ಹೆಗ್ಗಳಿಕೆ ಶರಣರಿಗೆ ಸಲ್ಲುತ್ತದೆ. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಚಿಂತನೆಗಳನ್ನು 12ನೇ ಶತಮಾನದಲ್ಲಿಯೇ ಅಲ್ಲಮಪ್ರಭು, ಬಸವಣ್ಣನವರು ಸಮರ್ಥವಾಗಿ ರೂಪಿಸಿದರು ಎಂದರು.
ಉಪನ್ಯಾಸಕ ನಾಗರಾಜ ಕೊಟ್ರಪ್ಪ ಮಾತನಾಡಿ, ಆದಿಮಾನವರ ಕಾಲದಿಂದ ಕೂಡ್ಲಿಗಿ ಐತಿಹಾಸಿಕವಾಗಿ ತನ್ನದೇ ಆದ ಮಹತ್ವ ಹೊಂದಿದೆ. ಜರಿಮಲೆ ಪಾಳೆಯಗಾರರು, ವೀರನ ದುರ್ಗದ ಪಾಳೆಗಾರರು ಸೇರಿದಂತೆ ಒನಕೆ ಒಬವ್ಬ ತವರೂರು ಗುಡೇಕೋಟೆ ಯಾಗಿರುವುದು ಈ ತಾಲೂಕಿನ ಹೆಮ್ಮೆಯ ಸಂಗತಿ. ವೀರನದುರ್ಗದಲ್ಲಿ ಏಳು ಸುತ್ತಿನ ಕೋಟೆ ಇದ್ದು, ಕಾಲನ ಹೊಡೆತಕ್ಕೆ ಸಿಲುಕಿ ಈಗ ಐದು ಸುತ್ತಿನ ಕೋಟೆ ಮಾತ್ರ ಉಳಿದಿದೆ.. ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಕೋಟೆಯನ್ನು ಸಂರಕ್ಷಣೆ ಮಾಡಿ ಈ ಕುರಿತು ಇನ್ನಷ್ಟು ಬೆಳಕು ಚೆಲ್ಲಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಬೇಕಿದೆ ಎಂದರು.