ಜಿಲ್ಲೆ

ಆರೋಗ್ಯಕ್ಕೆ ಯೋಗ್ಯ ಆಹಾರ: ಮನೋಹರ್ ಶೆಟ್ಟಿ ನಡಿಕಂಬಳಗುತ್ತು ಆಶಯ

Manikya M

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ವಿಶ್ವದ ಪ್ರತಿಜೀವಿಯ ಹೊಟ್ಟೆ ತುಂಬಿಸುವುದು ರೈತನೇ ಹೊರತು ಸರ್ಕಾರವಲ್ಲ. ಮಕ್ಕಳು ಆರೋಗ್ಯವಂತರಾಗಿರಲು ನಾವೇ ಬೆಳೆಸಿದ ಯೋಗ್ಯವಾದ ಆಹಾರ ಸೇವಿಸಿ. ಕಾಲೇಜುಗಳಿಗೆ ಹೋಗಿ ಮಕ್ಕಳಿಗೆ ಗೇರು ರಸ ತಯಾರಿಸಲು ಕಲಿಸಿ. ಇದಕ್ಕಾಗಿ ಯಾರಾದರೂ ಸಿನಿಮಾ ನಟರನ್ನು ಕರೆಸಿ ಪ್ರಚಾರಪಡಿಸಬೇಕು ಎಂದು ರೈತ ಸಂಘ ಹಸಿರುಸೇನೆ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ನಡಿಕಂಬಳಗುತ್ತು ಹೇಳಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಉಳ್ಳಾಲ ಕಾಪಿಕಾಡ್‌ನಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೊಚ್ಚಿನ್ ಗೇರು ಮತ್ತು ಕೋಕೋ ಅಭಿವದ್ಧಿ ನಿರ್ದೇಶನಾಲಯ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಗೇರು ಮೇಳ ಮತ್ತು ವಿಚಾರ ಸಂಕಿರಣ-2025ದಲ್ಲಿ ಮಾತನಾಡಿದರು.

ಉಳ್ಳಾಲ ಕಷಿ ಮತ್ತು ತೋಟಗಾರಿಕಾ ಕೇಂದ್ರದ ಮುಖ್ಯಸ್ಥ ಡಾ.ಮಾರುತೇಶ್ ಎ.ಎಂ. ಸ್ವಾಗತಿಸಿದರು. ಬ್ರಹ್ಮಾವರ ಕೇಂದ್ರದ ಸಹಸಂಶೋಧನಾ ನಿರ್ದೇಶಕ ಡಾ.ಧನಂಜಯ ಬಿ. ಪ್ರಸ್ತಾವಿಸಿದರು. ಪ್ರವೀಣ್ ಕುಂಪಲ ನಿರೂಪಿಸಿದರು. ಡಾ.ಆರತಿ ಯಾದವಾಡ ವಂದಿಸಿದರು.

ಪ್ರಜ್ವಲ್‌ಗೆ ಜಮೀನು ಭರವಸೆ

ಕಿನ್ನಿಗೋಳಿಯ ಯುವಕ ಪ್ರಜ್ವಲ್ ಅವರ ಜೇನು ಅಣಿಕೊಂಬು ಬಿಡುಗಡೆಗೊಳಿಸಲಾಯಿತು. ಅವರ ಹೊಸ ಸಂಶೋಧನೆ ಬಗ್ಗೆ ಸ್ಪೀಕರ್ ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಜ್ವಲ್ ಅವರಿಗೆ ಜೇನುಕೃಷಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂಕ್ಯುಬೇಷನ್‌ನಲ್ಲಿ ಬ್ರಹ್ಮಾವರದಲ್ಲಿ ಜಮೀನು ನೀಡಿ ತರಬೇತಿ ಕೊಡುತ್ತೇವೆ. ಬಳಿಕ ಆತನೂ ಇತರರಿಗೆ ತರಬೇತಿ ನೀಡಬೇಕು ಎಂದು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ತಿಳಿಸಿದರು.