ಜಿಲ್ಲೆ

ಮನೆಬಾಗಿಲಿಗೆ ಆರೋಗ್ಯ ಸೇವೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ನಂದಗುಡಿ ಆರೋಗ್ಯಾಧಿಕಾರಿ ಡಾ. ಭಾಸ್ಕರ್ ರೆಡ್ಡಿ ಅನಿಸಿಕೆ

ನಂದಗುಡಿ: ಆಧುನಿಕ ಜೀವನ ಶೈಲಿ ಸೇರಿ ಅನೇಕ ಕಾರಣಗಳಿಂದ ಆರೋಗ್ಯ ಸಮಸ್ಯೆಗಳು ಗಂಭೀರವಾಗುತ್ತಿವೆ. ಇನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಪ್ರಮುಖ ಕಾರಣವಾಗಿವೆ ಎಂದು ನಂದಗುಡಿ ಆರೋಗ್ಯಾಧಿಕಾರಿ ಡಾ.ಭಾಸ್ಕರ್ ರೆಡ್ಡಿ ತಿಳಿಸಿದರು.

ನಂದಗುಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗೃಹ ಆರೋಗ್ಯ ಯೋಜನೆಯಡಿ ಆರೋಗ್ಯ ಸೇವೆ ಮನೆ ಬಾಗಿಲಿಗೆ ಯೋಜನೆ ಚಾಲನೆ ಹಿನ್ನೆಲೆಯಿಂದಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಆರೋಗ್ಯದ ಬಗ್ಗೆ ಹೆಚ್ಚಿನ ಜನರು ಕಾಳಜಿ ವಹಿಸದೆ ಇರುವುದು, ನಿಯಮಿತವಾಗಿ ವ್ಯಾಯಾಮ, ಉತ್ತಮ ಆಹಾರ ಪದ್ಧತಿಯನ್ನು ಅನುಸರಿಸದೆ ಇರುವ ಕಾರಣ ರಕ್ತದೊತ್ತಡ, ಸಕ್ಕರೆ ಕಾಯಿಲೆ, ವಯಸ್ಸಿನ ಮಿತಿಯೂ ಇಲ್ಲದೇ ಎಲ್ಲರಲ್ಲಿಯೂ ಕಾಣಿಸಿಕೊಳ್ಳುತ್ತಿದೆ ಎಂದರು.

ಹೆಚ್ಚಿನ ಜನರು ತಮಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಇದ್ದರೂ ತಪಾಸಣೆಗೆ ಒಳಗಾಗುವುದಿಲ್ಲ, ಚಿಕಿತ್ಸೆ ಪಡೆದುಕೊಳ್ಳುತ್ತಿಲ್ಲ. ಹೀಗಾಗಿ ಗೃಹ ಆರೋಗ್ಯ ಯೋಜನೆ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಬಿಪಿ, ಶುಗರ್ ಇದ್ದವರಿಗೆ ಉಚಿತವಾಗಿ ಮನೆಗೆ ಔಷಧಗಳನ್ನು ತಲುಪಿಸಲಾಗುತ್ತದೆ ಎಂದರು. ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುವ 45 ಗ್ರಾಮಗಳಲ್ಲಿ ಗ್ರಾಮ ಆರೋಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ಜನಸಂಖ್ಯೆ ಅಂಕಿ-ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಕುರಿತು ಚರ್ಚಿಸಿದರು.

ಗ್ರಾಪಂ ಸದಸ್ಯರಾದ ವೀರರಾಜು, ಮಂಜುಳಾ ನಾಗೇಶ್, ಸುನೀತಾ ರಾಮೇಗೌಡ, ಚೇತನ್, ನಾಗಮ್ಮ, ಶಾಂತಮ್ಮ ಹನುಮಂತಪ್ಪ, ಅನುರಾಧ ನಟರಾಜ್, ಶಿವಕುಮಾರ್, ಆರೋಗ್ಯ ಸಿಬ್ಬಂದಿ ಮಹಾಲಕ್ಷ್ಮಿ, ಗೀತಾ, ಪೂಜಾ, ಶ್ವೇತಾ, ಶಾಮಲಾ, ರಂಜಿತಾ, ಚೈತ್ರಾ, ಮಧುಶ್ರೀ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.