ಜಿಲ್ಲೆ

ಆರೋಗ್ಯಯುತ ಹವ್ಯಾಸ ಬೆಳೆಸಿಕೊಳ್ಳಿ: ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ ಸಲಹೆ

reportermys
ಮಂಡ್ಯ: ಸಾರ್ವಜನಿಕರು ಆರೋಗ್ಯಯುತವಾದ ಹವ್ಯಾಸ ಬೆಳೆಸಿಕೊಳ್ಳಬೇಕು. ಅದರಂತೆ ಈ ಬಗ್ಗೆ ಜಾಗೃತಿ ಹೆಚ್ಚಿಸಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಹೇಳಿದರು.
ನಗರದ ಜಿಪಂ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕೆಎಚ್‌ಪಿಟಿ ಸಂಸ್ಥೆ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ ಯೋಜನೆಯಡಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪತ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಆರೋಗ್ಯ ರಕ್ಷಣೆ ಮತ್ತು ತಪಾಸಣೆಯನ್ನು ನಿರಂತರವಾಗಿ ಮಾಡಿಸಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು. ಅದರಂತೆ ತರಬೇತಿ ಪಡೆದವರು ಮಾನವೀಯ ನೆಲೆಗಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಕಾರ್ಯರೂಪಗೊಳಿಸಬೇಕಿದೆ ಎಂದು ಸೂಚನೆ ನೀಡಿದರು. 
ಅಮೃತ ಅಭಿಯಾನ ಯೋಜನೆಯಡಿ ಈಗಾಗಲೇ ಪ್ರತಿ ಗ್ರಾಪಂಗೆ ಕಿಟ್‌ಗಳನ್ನು ಒದಗಿಸಲಾಗಿದೆ. ಈ ಕಿಟ್‌ನಲ್ಲಿ 11 ಸಾಮಗ್ರಿ ಇರುತ್ತವೆ. ಮುಖ್ಯವಾಗಿ ಬಿಪಿ, ಷುಗರ್ ಇತರೆ ಆರೋಗ್ಯ ತಪಾಸಣೆ ಮಾಡುವ ಉಪಕರಣಗಳನ್ನು ನೀಡಲಾಗಿದೆ. ಆರೋಗ್ಯಕರ ಉಪಕರಣಗಳನ್ನು ಬಳಸಿ ಜನರ ಆರೋಗ್ಯ ಸುಧಾರಣೆ ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಕಾಯಿಲೆಗಳು ಬರದಂತೆ ಜಾಗೃತಿ ವಹಿಸುವುದು. ಕಾಯಿಲೆಗಳು ಯಾವುದರಿಂದ ಬರುತ್ತವೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಆರೋಗ್ಯಯುತ ಆಹಾರ, ಮನೆ ಅಡುಗೆ ಸೇವನೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. 
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಮಾತನಾಡಿ. ಎಲ್ಲ ಇಲಾಖೆಗಳ ಗುರಿ ಸಮಾಜ ಅಭಿವೃದ್ದಿ ಮತ್ತು ನಾಗರಿಕರಿಗೆ ಉತ್ತಮ ಆರೋಗ್ಯ ಕೊಡುವಂತದ್ದಾಗಿದೆ. ಅವರ ಜೀವಿತಾವಧಿಯನ್ನು ಹೆಚ್ಚಿಸುವುದು. ಯಾವುದೇ ತರದ ಕಾಯಿಲೆಗಳು ಬರದಂತೆ ಜೀವನಮಟ್ಟವನ್ನು ಸುಧಾರಿಸುವ ಕಾರ್ಯಕ್ರಮಗಳೇ ಆಗಿರುತ್ತವೆ. ಗ್ರಾಪಂ ವ್ಯಾಪ್ತಿಯಲ್ಲಿ ಹಳ್ಳಿಗಳ ಸ್ವಚ್ಛತೆ, ಜನತೆಯ ಆರೋಗ್ಯವೃದ್ದಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಸಾಂಕ್ರಮಿಕ ರೋಗ ಮುಕ್ತತೆಗೆ ಕಾಳಜಿ ನೀಡಲಾಗಿದೆ. ಹೊಸ ಹೊಸ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿದ್ದೇವೆ ಎಂದರು.
ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್‌ಕುಮಾರ್, ಡಾ.ವೇಣುಗೋಪಾಲ, ಶಶಿಧರ್, ಕೆ.ಆರ್.ಅನಿಲ್‌ಕುಮಾರ್, ನಾಗೇಂದ್ರ ಇತರರಿದ್ದರು.