ಜಿಲ್ಲೆ

ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶಿಬಿರಗಳು ಸಹಕಾರಿ

Kopala - Desk - Eraveni

ಅಳವಂಡಿ: ರೋಗಗಳನ್ನು ಮೊದಲ ಹಂತದಲ್ಲೇ ಪತ್ತೆಹಚ್ಚಿ, ಚಿಕಿತ್ಸೆ ನೀಡುವುದು ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಆರೋಗ್ಯ ತಪಾಸಣಾ ಶಿಬಿರಗಳು ಸಹಕಾರಿ ಎಂದು ತಾಲೂಕ ಯೋಜನಾಧಿಕಾರಿ ಜಗದೀಶ.ಕೆ.ಎಚ್, ತಿಳಿಸಿದರು.

ಸಮೀಪದ ಬೆಟಗೇರಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಶುಕ್ರವಾರ ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಭಾಗದ ಜನರಿಗೆ ರೋಗಗಳ ಬಗ್ಗೆ ಜಾಗೃತಿ ಮೂಡಿಸುವದು ಹಾಗೂ ರೋಗ ತಪಾಸಣಾ ಶಿಬಿರಗಳನ್ನ ಆಯೋಜಿಸಲಾಗುತ್ತಿದೆ. ಜನರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಮಾಜಿ ತಾಪಂ ಸದಸ್ಯ ವೀರೇಶ ಸಜ್ಜನ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆರೋಗ್ಯಕರ ಜೀವನಶೈಲಿ ಮತ್ತು ನಿಯಮಿತ ತಪಾಸಣೆಗಳ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದೆ. ಕಾಯಿಲೆಗಳು ಬರುವುದಕ್ಕಿಂತ ಮುಂಚಿತವಾಗಿ ತಡೆಗಟ್ಟುವ ಕ್ರಮಗಳನ್ನು ಪ್ರೋತ್ಸಾಹಿಸುತ್ತದೆ. ಜೊತೆಗೆ ವೈದ್ಯಕೀಯ ಸೌಲಭ್ಯಗಳು ಸುಲಭವಾಗಿ ಲಭ್ಯವಿಲ್ಲದ ಜನರಿಗೆ ಆರೋಗ್ಯ ಸೇವೆಗಳನ್ನು ತಲುಪಿಸುತ್ತದೆ. ಎಲ್ಲರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದರು.

ಪ್ರಮುಖರಾದ ಅನ್ನದಾನಸ್ವಾಮಿ ಸಾಲಿಮಠ, ಶಂಕ್ರಪ್ಪ ಬಡಿಗೇರ, ಬಸವರಾಜ ನಾಗರೆಡ್ಡಿ, ಮುತ್ತಯ್ಯ ಹಿರೇಮಠ, ಶೇಖರಪ್ಪ, ಬಸಯ್ಯ, ಶಂಕ್ರಪ್ಪ, ವಿನುತಾ ಬೆಟಗೇರಿ, ವಲಯ ಮೇಲ್ವಿಚಾರಕ ಲಿಂಗರಾಜು, ಜ್ಞಾನ ವಿಕಾಸ್ ಅಧಿಕಾರಿ ಗೀತಾ, ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು, ಸೇವಾಪ್ರತಿನಿಧಿಗಳು ಇದ್ದರು.