ಸಿದ್ದಾಪುರ: ನಿವೃತ್ತ ನೌಕರರು ಹಾಗೂ ಹಗಲು, ರಾತ್ರಿ ಶ್ರಮಿಸುವ ಯಕ್ಷಗಾನ ಕಲಾವಿದರಿಗೆ ಆರೋಗ್ಯ ತಪಾಸಣೆ ಅತ್ಯಗತ್ಯವಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿ ಹೇಳಿದರು.
ಪಟ್ಟಣದ ಲಯನ್ಸ್ ಬಾಲಭವನದಲ್ಲಿ ತಾಲೂಕು ನಿವೃತ್ತ ನೌಕರರ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ನಿವೃತ್ತ ನೌಕರರಿಗೆ ಜೀವನ ಪ್ರಮಾಣಪತ್ರ ವಿತರಣೆ, ಆರೋಗ್ಯ ತಪಾಸಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷ ಸಿ.ಎಸ್. ಗೌಡರ್ ಮಾತನಾಡಿ, ನಿವೃತ್ತ ನೌಕರರು ಪ್ರತಿವರ್ಷ ಸಲ್ಲಿಸಬೇಕಾದ ಜೀವನ ಪ್ರಮಾಣಪತ್ರವನ್ನು ಬ್ಯಾಂಕಿಗೆ ಹೋಗಿ ಪಡೆಯುವ ಕಷ್ಟವನ್ನು ಪರಿಹರಿಸಲು ಅಧಿಕಾರಿಗಳೇ ಇಲ್ಲಿಗೆ ಬಂದು ನೀಡುವ ವ್ಯವಸ್ಥೆ ಮಾಡಲಾಗಿದೆ. ನಿವೃತ್ತ ನೌಕರರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇದರೊಂದಿಗೆ ಕೇಶವ ಹೆಗಡೆ ಅವರನ್ನು ಅಭಿನಂದಿಸುವ ಅವಕಾಶ ದೊರಕಿದೆ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜಿ.ಜಿ. ಹೆಗಡೆ ಬಾಳಗೋಡ, ಪತ್ರಕರ್ತ ಗಂಗಾಧರ ಕೊಳಗಿ, ಸಂಕಲ್ಪ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಬಿ. ಹೊಸೂರು, ಎಸ್ಬಿಐ ಬ್ಯಾಂಕ್ನ ರಾಮ ನಾಯ್ಕ ಮಾತನಾಡಿದರು. ಬ್ಯಾಂಕ್ ಅಧಿಕಾರಿಗಳಾದ ಶಿವಶಂಕರ ಕೋಲಸಿರ್ಸಿ, ಸಿದ್ಧಿವಿನಾಯಕ ಶೇಟ್, ಡಾ. ಕಾವ್ಯಾ, ಸಂಘದ ಉಪಾಧ್ಯಕ್ಷ ಎನ್.ವಿ. ಹೆಗಡೆ, ಇತರರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ವಿ.ಎಸ್. ಶೇಟ್ ಹಾಗೂ ಜಿ.ಎಂ. ಕುಮಟಾಕರ ಕಾರ್ಯಕ್ರಮ ನಿರ್ವಹಿಸಿದರು. ನಂತರ ನಿವೃತ್ತ ನೌಕರರಿಗೆ ಜೀವನ ಪ್ರಮಾಣಪತ್ರ ವಿತರಣೆ ಹಾಗೂ ಆರೋಗ್ಯ ತಪಾಸಣೆ ನಡೆಯಿತು.