ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರ.  
ಜಿಲ್ಲೆ

ಆರೋಗ್ಯ ಸಚಿವರೇ ಈ ಕಡೆವೊಮ್ಮೆ ನೋಡಿ

ಕಲಾದಗಿ: ರಾಜ್ಯದಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಮಿತಿ ಹೊಂದಿರುವ ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಎಲ್ಲ ಅರ್ಹತೆಗಳಿದ್ದರೂ ಆ ನಿಟ್ಟಿನಲ್ಲಿ ಪ್ರಯತ್ನ ನಡೆಯದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

80 ಸಾವಿರ ಜನಸಂಖ್ಯೆಯ ವ್ಯಾಪ್ತಿ ಹೊಂದಿರುವ ಈ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಒಬ್ಬ ವೈದ್ಯ ಮಾತ್ರ ಕಾರ್ಯನಿರ್ವಹಿಸುತ್ತಿರುವುದು ಅಚ್ಚರಿ ವಿಷಯವಾಗಿದೆ.

ಅನೇಕ ವರ್ಷಗಳಿಂದ ಮಂಜೂರಾಗದ ಮಹಿಳಾ ವೈದ್ಯೆ ಹುದ್ದೆ, ಖಾಲಿ ಇರುವ ಸ್ಟಾಫ್ ನರ್ಸ್‌ಗಳ ಹುದ್ದೆಗಳು, ಉತ್ತಮ ಕಟ್ಟಡದ ಕೊರತೆ ಇಂತಹ ಹತ್ತು ಹಲವು ಸಮಸ್ಯೆಗಳ ಆಗರವಾಗಿದೆ ಕಲಾದಗಿ ಆಸ್ಪತ್ರೆ.

ವಿಶಾಲ ವ್ಯಾಪ್ತಿ: ಸರಿಸುಮಾರು 30 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿರಬೇಕು ಎಂಬುದು ಸರ್ಕಾರದ ನಿಯಮ. ಆದರೆ, ಈ ನಿಯಮ ಇಲ್ಲಿ ಅನ್ವಯವಾಗದಿರುವುದು ಸರ್ಕಾರದ ಅಸಡ್ಡೆಗೆ ಸಾಕ್ಷಿ ಒದಗಿಸುವಂತಿದೆ. ಕಲಾದಗಿ, ಯಂಕಂಚಿ, ಕದಾಂಪುರ, ಮುರುನಾಳ ಸೇರಿ ಸುತ್ತಮುತ್ತಲಿನ ಊರುಗಳ 80 ಸಾವಿರಕ್ಕೂ ಅಧಿಕ ಜನರು ಈ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುತ್ತಾರೆ. ಕೂಡಲೇ ಸರ್ಕಾರ ಪಿಎಚ್‌ಸಿಯನ್ನು ಮೇಲ್ದರ್ಜೆಗೇರಿಸಬೇಕಾದ ಇಚ್ಛಾಶಕ್ತಿ ತೋರಬೇಕಾಗಿದೆ.

ತುರ್ತು ಅಗತ್ಯಗಳೇನು?

ಆರೋಗ್ಯ ಕೇಂದ್ರಕ್ಕೆ ಓರ್ವ ಪುರುಷ ಹಾಗೂ ಮಹಿಳಾ ವೈದ್ಯರ ಅವಶ್ಯಕತೆ ಇದೆ. ತಕ್ಷಣ ನೇಮಕಗೊಳಿಸುವ ಕಾರ್ಯವಾಗಬೇಕು. ಜತೆಗೆ ಖಾಲಿ ಇರವ ಇನ್ನುಳಿದ ಹುದ್ದೆಗಳ ಭರ್ತಿ, ಇನ್ನೊಂದು ಆರೋಗ್ಯ ಕೇಂದ್ರ ಸ್ಥಾಪನೆಯ ಮೂಲಕ ವ್ಯಾಪ್ತಿ ಕಡಿಮೆ ಮಾಡುವುದು ಹಾಗೂ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕಿದೆ.

ಬಹುದೊಡ್ಡ ವ್ಯಾಪ್ತಿಯ ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಆರೋಗ್ಯ ಸಚಿವರನ್ನು ಪ್ರಶ್ನಿಸಿದ್ದು, ಸಚಿವರ ಉತ್ತರದ ನಿರೀಕ್ಷೆಯಲ್ಲಿದ್ದೇನೆ. ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ ವ್ಯವಸ್ಥೆ ಒದಗಿಸುವುದು ನನ್ನ ಆದ್ಯತೆಗಳಲ್ಲೊಂದು. ಈ ವಿಚಾರದಲ್ಲಿ ಆಗುವ ಯಾವುದೇ ಅವ್ಯವಸ್ಥೆಯನ್ನು ಸಹಿಸಲಾಗದು. ಜೆ.ಟಿ. ಪಾಟೀಲ, ಶಾಸಕರು

ಮುರುನಾಳ ಪಿಎಸ್‌ಸಿ ನೆನಗುದಿಗೆ

ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿ ಕಡಿಮೆ ಮಾಡುವ ಉದ್ದೇಶದಿಂದ ಸಮೀಪದ ಮುರುನಾಳ ಆರ್‌ಸಿಯಲ್ಲಿ ಮತ್ತೊಂದು ಪಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಯೋಜನೆ ರೂಪಿಸಿ ಕಟ್ಟಡ ನಿರ್ಮಿಸಲಾಗಿದೆ. ಸದರಿ ಕಟ್ಟಡ ಮುರಾರ್ಜಿ ವಸತಿ ಶಾಲೆಗೆ ಬಳಸಲಾಗಿದೆ. ಮುರುನಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಯೋಜನೆ ಬರೀ ಮಾತಾಗಿ ಉಳಿದಿದೆ.