ಬೆಂಗಳೂರು: ಸರ್ಕಾರಿ ಔಷಧಾಲಯಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬುಧವಾರ ಔಷಧ ನಿಯಂತ್ರಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ವಿಕಾಸಸೌಧದಲ್ಲಿ ಬುಧವಾರ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಿಟ್ಟಾದರು. ರಾಜ್ಯದ ಮಾರುಕಟ್ಟೆಯಲ್ಲಿ ಯಾರ ಭಯವೂ ಇಲ್ಲದೆ ಕಳಪೆ ಗುಣಮಟ್ಟದ ಔಷಧಗಳು ಪೂರೈಕೆ ಆಗುತ್ತಿವೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಔಷಧ ನಿಯಂತ್ರಣ ಇಲಾಖೆ ಏನು ಮಾಡುತ್ತಿದೆ. ಇಲಾಖೆಯ ಉದ್ದೇಶವಾದರೂ ಏನು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕರ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ಔಷಧಿಗಳ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. ಆದರೆ ಅಂತಹ ಕಾರ್ಯವೈಖರಿ ಇಲಾಖೆಯ ಅಧಿಕಾರಿಗಳಿಂದ ಕಂಡುಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಔಷಧಿಗಳ ಗುಣಮಟ್ಟದ ವಿಚಾರದಲ್ಲಿ ಯಾವ ಕ್ರಮಗಳನ್ನ ಕೈಗೊಳ್ಳುತ್ತಿದ್ದೀರಿ, ಈವರೆಗೂ ಎಷ್ಟು ಕಳಪೆ ಔಷಧಗಳ ತಯಾರಿಕರ ಮೇಲೆ ಕ್ರಮ ಕೈಗೊಂಡಿದ್ದೀರಾ? ಯಾವ ಔಷಧಗಳನ್ನು ಪರೀಕ್ಷೆಗೆ ಒಳಪಡಿಸಿದ್ದೀರಾ? ಎಂದು ಪ್ರಶ್ನಿಸಿದರು.
ಕಳಪೆ ಔಷಧಗಳು ಮಾರುಕಟ್ಟೆಗಳಲ್ಲಿ ಸಿಗದ ರೀತಿಯಲ್ಲಿ ನೋಡಿಕೊಳ್ಳುವುದು, ಕ್ರಮವಹಿಸುವುದು ಔಷಧ ನಿಯಂತ್ರಕರ ಜವಾಬ್ದಾರಿಯಲ್ಲವೇ? ಎಂದ ಸಚಿವರು, ಈವರೆಗೂ ಕಳಪೆ ಔಷಧ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿಸ್ತೃತ ವರದಿ ನೀಡುವಂತೆ ಹಾಗೂ ಗುಣಮಟ್ಟ ಅಲ್ಲದ ಔಷಧಗಳ ಮಾರಾಟ ತಡೆಯುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಔಷಧ ನಿಯಂತ್ರಣ ಅಧಿಕಾರಿಗಳಿಗೆ ಸೂಚಿಸಿದರು.
ಸುಮ್ಮನೆ ಸ್ಪೆಷಲ್ ಡ್ರೈವ್ ಎಂದು ಹೇಳುತ್ತಿದ್ದೀರಾ ಆದರೆ ಇದರಿಂದ ಯಾವುದೇ ಪರಿಣಾಮ ಕಂಡು ಬರುತ್ತಿಲ್ಲ. ಈ ವಿಚಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹೆದರುವ ಅವಶ್ಯಕತೆ ಇಲ್ಲ. ಯಾವುದೇ ರೀತಿಯ ಒತ್ತಡಕ್ಕೂ ಮಣಿಯದೆ ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಕೆಲಸ ಮಾಡಿ. ನಿಮಗೆ ಸರ್ಕಾರ ರಕ್ಷಣೆ ನೀಡಲಿದೆ ಎಂದು ಭರವಸೆ ನೀಡಿದರು.
ಇಲಾಖೆಯನ್ನು ಮುಚ್ಚೋಣವೇ? ಔಷಧ ನಿಯಂತ್ರಣಾ ಅಧಿಕಾರಿಗಳ ವಿವರಣೆಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ಎಲ್ಲವೂ ಸರಿಯಿದ್ದರೆ ಔಷಧ ನಿಯಂತ್ರಣ ಇಲಾಖೆಯನ್ನ ಮುಚ್ವಿಬಿಡೊಣವೇ? ಎಂದು ಪ್ರಶ್ನಿಸಿದರು. ಕಳಪೆ ಔಷಧಗಳ ತಯಾರಕರ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲು ನಿಮಗೆ ಸಾಧ್ಯವಾಗಿಲ್ಲ. ನೀವು ಇನ್ನೇನು ಕೆಲಸ ಮಾಡ್ತಿದ್ದೀರಾ? ಅರೆ ಬರೆ ಅಂಕಿ ಅಂಶಗಳನ್ನು ಮುಂದಿಟ್ಟು ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಭೆಗೆ ಬರುವ ಮುನ್ನ ಸಂಪೂರ್ಣ ಮಾಹಿತಿ ತರಬೇಕು. ಸಚಿವರು ಸೂಚನೆಯಂತೆ ಕಳಪೆ ಔಷಧಗಳು ಜನರನ್ನು ತಲುಪದ ರೀತಿಯಲ್ಲಿ ಕ್ರಮ ಕೈಗೊಳ್ಳುವುದು ನಿಮ್ಮ ಮುಖ್ಯ ಕೆಲಸ ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಿ ಎಂದು ಎಚ್ಚರಿಕೆ ನೀಡಿದರು.
ವರದಿ ಪ್ರಕಟಿಸಿದ್ದ ವಿಜಯವಾಣಿ :‘ಸರ್ಕಾರಿ ಆಸ್ಪತ್ರೆಗಳಿಗೆ ಕೊಟ್ಟಿದ್ದ ಗ್ಲೂಕೋಸ್ ವಾಪಸ್’ ಶೀರ್ಷಿಕೆಯಡಿ ವಿಜಯವಾಣಿ ಮುಖಪುಟದಲ್ಲಿ ಮಾ.26ರಂದು ಹಾಗೂ ‘ಮನುಷ್ಯರ ಬಳಕೆಗೆ ಪಶುಗಳ ಔಷಧ ಪೂರೈಕೆ’ ಶೀರ್ಷಿಕೆಯಡಿ ಮೇ 18ರಂದು ವಿಶೇಷ ವರದಿಗಳ ಪ್ರಕಟಿಸುವ ಮೂಲಕ ಸರ್ಕಾರದ ಗಮನ ಸೆಳೆದಿತ್ತು.