ಜಿಲ್ಲೆ

ಕರೊನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ : ಆರೋಗ್ಯ ಸಚಿವ ಬಿ.ಶ್ರೀರಾಮುಲು

ತುಮಕೂರು: ಕರೊನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡುವ ಪ್ರಯೋಗವನ್ನು ಮೊದಲು ಆರಂಭಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕರೊನಾ ನಿಯಂತ್ರಣ ಕುರಿತು ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಬೆಂಗಳೂರು ವೈದ್ಯಕೀಯ ಕಾಲೇಜು, ಹೆಲ್ತ್‌ಕೇರ್ ಗ್ಲೋಬಲ್ (ಎಚ್‌ಸಿಜಿ) ಸಹಯೋಗದಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡಾ.ಯು.ಎಸ್. ವಿಶಾಲ್ ರಾವ್ ನೇತೃತ್ವದ ತಂಡ ಪ್ಲಾಸ್ಮಾಥೆರಪಿ ಚಿಕಿತ್ಸೆ ಆರಂಭಿಸಿದ್ದು, ವೆಂಟಿಲೇಟರ್‌ನಲ್ಲಿರುವ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ 500 ಕರೊನಾ ಪಾಸಿಟಿವ್ ಪ್ರಕರಣಗಳಲ್ಲಿ 153 ಜನ ಗುಣಮುಖರಾಗಿದ್ದಾರೆ. ಇವರನ್ನು ಸಂಪರ್ಕ ಮಾಡುತ್ತಿದ್ದೇವೆ. ಇವರು 15 ದಿನಕ್ಕೊಮ್ಮೆ ಪ್ಲಾಸ್ಮಾ ನೀಡಬಹುದಾಗಿದ್ದು, ಗುಣಮುಖರಾದವರು ಸ್ವಯಂಪ್ರೇರಣೆಯಿಂದ ಸಹಕಾರ ನೀಡಬೇಕು ಎಂದು ತಿಳಿಸಿದರು.

ತುಮಕೂರಿನಲ್ಲಿ ಲ್ಯಾಬ್: ಕರೊನಾ ಸೋಂಕು ಪರೀಕ್ಷೆಗೆ ರಾಜ್ಯದಲ್ಲಿ ಸದ್ಯ 19 ಪ್ರಯೋಗಾಲಯಗಳಿದ್ದು, ತುಮಕೂರು ಸೇರಿ ರಾಜ್ಯದ ವಿವಿಧೆಡೆ 40 ಪ್ರಯೋಗಾಲಯಗಳನ್ನು ತೆರೆಯಲಾಗುವುದು. ಮೇ 1 ರಿಂದಲೇ ತುಮಕೂರಿನ ಪ್ರಯೋಗಾಲಯ ಆರಂಭಿಸುವ ಸಾಧ್ಯತೆ ಇದೆ ಎಂದು ಸಚಿವ ರಾಮುಲು ಭರವಸೆ ನೀಡಿದರು. ನಮ್ಮ ರಾಜ್ಯವು ಕರೊನಾ ನಿಯಂತ್ರಣದಲ್ಲಿ 11ನೇ ಸ್ಥಾನದಲ್ಲಿದೆ. ಕರೊನಾ ವಾರಿಯರ್ಸ್‌ಗಳಾಗಿರುವ ವೈದ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಇಲಾಖೆ ಸೇರಿ ಒಟ್ಟು 10 ಇಲಾಖೆ ಸಿಬ್ಬಂದಿ ಕರೊನಾ ಪರೀಕ್ಷೆಗಾಗಿ ಜಿಲ್ಲೆಗೆ ಅಗತ್ಯವಾದ 8000 ರ‌್ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ನೀಡಲಾಗುವುದು ಎಂದರು. ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಜಿಪಂ ಸಿಇಒ ಶುಭಾ ಕಲ್ಯಾಣ್, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಸೇರಿ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು. ಸಭೆಯ ನಂತರ ಕರೊನಾ ಆಸ್ಪತ್ರೆಯಾಗಿರುವ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

3 ವರ್ಷ ಜೈಲು ಶಿಕ್ಷೆ: ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡುವ ಕಿಡಿಗೇಡಿಗಳ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆ 1987ರ ಅಡಿ ಪ್ರಕರಣ ದಾಖಲಿಸಿ 3 ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಎಚ್ಚರಿಸಿದರು.

ವಿದೇಶದಿಂದ ಬಂದವರ ಕ್ವ್ಟಾರಂಟೈನ್ ಅವಧಿ ಮುಗಿದಿದ್ದರೂ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಹೆಚ್ಚಿನ ಸೋಂಕು ಹರಡಿರುವ ದೇಶದಿಂದ ಬಂದವರ ಮಾದರಿಗಳು 2ನೇ ಬಾರಿಯೂ ನೆಗೆಟಿವ್ ಬಂದಿದೆ. ಕರೊನಾ ಆಸ್ಪತ್ರೆಗೆ ಹೆಚ್ಚಿನ ವೆಂಟಿಲೇಟರ್ ಅವಶ್ಯಕತೆಯಿದೆ. ಅಲ್ಲದೇ ಖಾಸಗಿ ಆಸ್ಪತ್ರೆಗಳಿಂದ ಬಂದಿರುವ ಉಸಿರಾಟದ ಸಮಸ್ಯೆ, ಜ್ವರ ಲಕ್ಷಣಗಳಿರುವವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ