ಹುಬ್ಬಳ್ಳಿ: ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಧಾರವಾಡ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿರಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿತ್ತು.
ರಕ್ತದೊತ್ತಡ, ಮಧುಮೇಹ, ಕಣ್ಣಿನ ತಪಾಸಣೆ , ವಯಸ್ಕರಿಗೆ ಬಿಸಿಜಿ ಲಸಿಕೆ , ಗರ್ಭಿಣಿಯರಿಗೆ ತಪಾಸಣೆ ಹೀಗೆ ಹಲವು ತಪಾಸಣೆಯನ್ನು ನಡೆಸಲಾಯಿತು. ಆರೋಗ್ಯಕ್ಕೆ ಸಂಬಂಧಪಟ್ಟಂತೆ ಜಾಗೃತಿ ಮೂಡಿಸಲಾಯಿತು. ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.
ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದ ಗೃಹ ಆರೋಗ್ಯ ಬಗ್ಗೆ ಮಾಹಿತಿ ನೀಡಲಾಯಿತು. ಅಸಾಂಕ್ರಾಮಿಕ ರೋಗದ ರೋಗಿಗಳಿಗೆ ಎರಡು ತಿಂಗಳದ ಔಷಧಗಳನ್ನು ವಿತರಿಸಲಾಯಿತು.
ಗ್ರಾಪಂ ಅಧ್ಯಕ್ಷ ಬಸವರಾಜ ಹಸರೆಡ್ಡಿ ಉದ್ಘಾಟಿಸಿದರು. ಉಪಾಧ್ಯಕ್ಷೆ ಕಮಲಮ್ಮ ಜವಳಗೇರಿ, ಕೃಷಿ ಪತ್ತಿನ ಸಹಕಾರ ಸಂಘದ ಮಹದೇವಪ್ಪ ಹವಾಲ್ದಾರ್, ವೈದ್ಯಾಧಿಕಾರಿ ಡಾ. ಮಹಾಂತೇಶ ಅಡ್ವಾಣಿ, ಸುಜಾತಾ ಪಿ., ಗಂಗಾಧರ, ಮಹಿಳಾ ಒಕ್ಕೂಟ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಸಮುದಾಯ ಆರೋಗ್ಯ ಅಧಿಕಾರಿ ಶಬಾನಾಬಾನು ಕಣವಿ ನಿರೂಪಿಸಿದರು.