ಜಿಲ್ಲೆ

ಆರೋಗ್ಯವನ್ನು ಕಾಪಾಡಿಕೊಂಡು ನೆಮ್ಮದಿ ಜೀವನ ನಡೆಸಲು ಸಲಹೆ

ಚಿಕ್ಕಬಳ್ಳಾಪುರ : ಎಲ್ಲರಿಗೂ ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವೂ ಬಹಳ ಮುಖ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ತಿಳಿಸಿದರು.

ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾರ್ಮಿಕ ಇಲಾಖೆ, ಷೆಲ್ ಅಪರೆಲ್ಸ್ ಪ್ರೈ. ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಕೈಗೊಂಡಿದ್ದ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ” ಕಾರ್ಯಕ್ರಮನ್ನು ಉದ್ಘಾಟಿಸಿ  ಮಾತನಾಡಿದರು.

ಒಳ್ಳೆಯ ಮಾನವ ಸಂಪನ್ಮೂಲವು ಆರೋಗ್ಯಕರ ಸಮಾಜ ಮತ್ತು ರಾಷ್ಟ್ರವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರತಿಯೊಬ್ಬರೂ ಉತ್ತಮ ಮತ್ತು ಸಮತೋಲಿತ ಜೀವನಕ್ಕಾಗಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೊಂದಿರಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ಮಾತನಾಡಿ, ಪ್ರತಿ ವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಇದು 1992 ರಲ್ಲಿ ವಿಶ್ವ ಮಾನಸಿಕ ಆರೋಗ್ಯ ಸಂಸ್ಥೆಯಿಂದ ಸೇರಿ 12 ದೇಶಗಳು ಈ ಕಾರ್ಯಕ್ರಮವನ್ನು ರೂಪಿಸಿದ್ದು ಡೆಪ್ಯುಟಿ ಸೆಕ್ರೆಟರಿ  ರಾಬರ್ಟ್ ಹಂಟರ್ ಎಂಬುವರು ಜಾರಿಗೊಳಿಸಿದರು. ಇದರ ಪ್ರಮುಖ ಉದ್ದೇಶ, ಜನರಲ್ಲಿ ಮಾನಸಿಕ ಜಾಗೃತಿಯನ್ನು ಮೂಡಿಸುವುದು. ಇದಕ್ಕೆ 150 ಕ್ಕಿಂತ ಹೆಚ್ಚು ದೇಶಗಳು ಕಾರ್ಯಕ್ರಮದಲ್ಲಿ ಕೈ ಜೋಡಿಸಿವೆ ಎಂದರು. ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ  ಬಿ.ಶಿಲ್ಪ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಶಿವಕುಮಾರ್, ಮನೋವೈದ್ಯರಾದ ಡಾ.ಜಿ. ಹೇಮಂತ್ ಕುಮಾರ್, ಡಾ.ಎ ಲಾವಣ್ಯ, ಜಿಲ್ಲಾ ಕಾರ್ಮಿಕ ಅಧಿಕಾರಿ ಶಬಾನಾ ಅಜ್ಮಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಎಸ್.ಎಂ. ಮುರಳಿ ಮೋಹನ್ ಇತರರು ಉಪಸ್ಥಿತರಿದ್ದರು.