ಜಮಖಂಡಿ: ಆರೋಗ್ಯ ಸರಿಯಾಗಿದ್ದಾಗ ಅದರ ಮಹತ್ವ ಅರಿಯಬೇಕು ಎಂದು ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ ಹೇಳಿದರು.
ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಹಾಗೂ ಜಮಖಂಡಿಯ ಶಹರ ಪೊಲೀಸ್ ಠಾಣೆಯ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯ ಹದಗೆಡಿಸಿಕೊಂಡ ಬಳಿಕ ಮರಳಿ ಆರೋಗ್ಯ ಪಡೆಯಲಾಗದೆ ಪಶ್ಚಾತ್ತಾಪ ಪಡುವ ಪ್ರಸಂಗ ತಂದುಕೊಳ್ಳಬಾರದು ಎಂದರು.
ಗೌರವದ ಲಕ್ಷಣವೆಂದು ಭ್ರಮಿಸಿ ದುಶ್ಚಟಗಳ ದಾಸರಾಗಬಾರದು. ಮೋಜು ಮಾಡಲು ಹೋಗಿ ಸಜಾ ಅನುಭವಿಸುವಂಥ ಸಂದರ್ಭ ತಂದುಕೊಳ್ಳಬಾರದು. ಆಕರ್ಷಕ ಜಾಹೀರಾತುಗಳಿಗೆ ಮಾರು ಹೋಗಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಎಸ್‌ಐ ಸಿ.ಎಸ್. ಚಲವಾದಿ ಮಾತನಾಡಿ, ಮಾದಕ ವಸ್ತುಗಳ ಮಾರಾಟ ಅಥವಾ ಸಾಗಾಟ ಕಂಡು ಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಎಲ್.ಬಿ. ಕುಂಬಾರ ಉಪನ್ಯಾಸಕ ಶ್ರೀಕಾಂತ ಬೆಳ್ಳಿಹಾಳ ಇದ್ದರು.