ಜಿಲ್ಲೆ

ಆಯುರ್ವೆದ, ಯೋಗದಲ್ಲಿದೆ ಆರೋಗ್ಯ

ಬಸವರಾಜ ವೀರಪ್ಪ ಗರಗ

ಮುಂಡರಗಿ: ನಾವು ಹುಟ್ಟಿದ್ದು ಚೆನ್ನಾಗಿ ನೆಮ್ಮದಿಯಿಂದ ಬಾಳಲು ಮತ್ತು ಸುಖ, ಶಾಂತಿ, ಆರೋಗ್ಯದಿಂದ ಬದುಕಲು ಎಂಬುದನ್ನು ನಾವೆಲ್ಲರೂ ಅರಿಯಬೇಕು. ಆಯುರ್ವೆದ ಮತ್ತು ಯೋಗ ಇವೇ ನಮ್ಮ ದೇಶದ ಮೂಲ. ಇವುಗಳನ್ನು ಪರಸ್ಪರರು ಅರಿಯಬೇಕು ಎಂದು ಹುಬ್ಬಳ್ಳಿ ಶ್ರೀಗಂಗಾ ಯೋಗ ಚಿಕಿತ್ಸಾ ಮತ್ತು ಆರ್ಯುರ್ವೆದ ಸಂಶೋಧನಾ ಕೇಂದ್ರದ ಆಯುರ್ವೆದ ವೈದ್ಯ ಶ್ರೀ ಚನ್ನಬಸವಣ್ಣ ಹೇಳಿದರು.

ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಬುಧವಾರ ಜರುಗಿದ ‘ಅನುಭಾವಿಗಳ ಅನುಭಾವ ದರ್ಶನ’ ಪ್ರವಚನದಲ್ಲಿ ಅವರು ಮಾತನಾಡಿದರು. ಆಯುರ್ವೆದ ಎಂದರೆ ಔಷಧ ಅಂತ ತಿಳಿದಿದ್ದೇವೆ. ಆಯುರ್ವೆದದಲ್ಲಿ ಔಷಧ ಕೊಡುವುದು ಸಣ್ಣ ವಿಭಾಗ. ಮುಖ್ಯವಾಗಿ ಮನುಷ್ಯ ಆರೋಗ್ಯವಾಗಿರಲು ಮನಸು ಪ್ರಸನ್ನವಾಗಿರಬೇಕು. ಮನುಷ್ಯ ಮೂಲ ಆರೋಗ್ಯ ಪರಿಕಲ್ಪನೆ ಮರೆತಿದ್ದಾನೆ. ಮೂಲ ಆರೋಗ್ಯ ಆಯುರ್ವೆದಲ್ಲಿದೆ. ಆಯುರ್ವೆದಲ್ಲಿ ಮೊದಲು ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು. ಕೈಯಲ್ಲಿ ಮೊಬೈಲ್​ಫೋನ್ ಹಿಡಿದು ನೋಡುತ್ತ ಆಹಾರ ತಿನ್ನುವುದು ರೂಢಿಯಾಗಿದೆ. ತಿನ್ನುವ ಆಹಾರವು 108 ರೀತಿಯಲ್ಲಿ ಜೀರ್ಣವಾಗಬೇಕು. ಪರಮಾತ್ಮನ ನೆನಪಿನಲ್ಲಿ ಆಹಾರ ಸೇವಿಸಿದರೆ ಶೇ. 50ರಷ್ಟು ರೋಗ ಬರಲ್ಲ. ಆಯುರ್ವೆದ ಅಂದರೆ ಆಹಾರ ಶುದ್ಧಿ ಎಂದು ತಿಳಿಸಿದರು.

ಯೋಗವೆಂದರೆ ಕೃತವಲ್ಲ. ನೈಜ ಯೋಗ, ಸಹಜ ಯೋಗ, ನಿಷ್ಕಲ ಯೋಗ ಎಂದು ತಿಳಿಯಬೇಕು. ಜೀವನದಲ್ಲಿ ಸುಖವಾಗಿರಲು ಮನಸು ಸದಾ ಕಾಲ ಸಮಾಧಾನದಿಂದಿರಬೇಕು. ಮನಸು ಸಮಾಧಾನದಿಂದಿರಲು ನಾವು ಮಾಡಿದ ಉಪಕಾರ ಮರೆಯಬೇಕು, ನಮಗೆ ಕೆಟ್ಟದ್ದು ಮಾಡಿದವರನ್ನೂ ಮರೆಯಬೇಕು. ಆಗ ಮನುಷ್ಯ ಚೆನ್ನಾಗಿರುತ್ತಾನೆ. ಯಾರ ಮನಸು ಸಮಾಧಾನವಾಗಿರುತ್ತದೆಯೋ ಅವರು ನಿಜವಾದ ಯೋಗಿಗಳು. ಮೂಲ ಯೋಗ ಸೂತ್ರ ಕಾಣಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿದರು. ಧಾರವಾಡ ವಿಶ್ವ ವಿದ್ಯಾಲಯದ ಕೃಷಿ ವಿಜ್ಞಾನಿಗಳಾದ ಡಾ.ಬಸವರಾಜ ಏಣಗಿ ಹಾಗೂ ಡಾ.ಕುಮಾರ ಸಿ.ಟಿ. ಅವರು ಮಣ್ಣಿನ ಸಂರಕ್ಷಣೆ, ಬೆಳೆ ಪದ್ಧತಿ, ಕೀಟ, ರೋಗ ಬಾಧೆ ತಡೆಗಟ್ಟುವ ವಿಷಯ ಕುರಿತು ಮಾತನಾಡಿದರು.