ಮಂಡ್ಯ: ಬಿಪಿ ಹೆಚ್ಚಾಗಿ ತಲೆ ತಿರುಗಿ ಬಿದ್ದ ಪರಿಣಾಮ ಸ್ಪೈನಲ್ ಕಾರ್ಡ್‌ಗೆ ಗಂಭೀರವಾದ ಗಾಯವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ.
ಮೇ.25 ರಂದು ಮನೆಯಲ್ಲಿ ಮಲಗಿದ್ದ ವೇಳೆಯಲ್ಲಿ ಅವಘಡ ಸಂಭವಿಸಿತ್ತು. ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಲಾಗುತಿತ್ತು. ನಂತರ ವೈದ್ಯರ ಸಲಹೆ ಮೇರೆಗೆ ಮಾರತಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲೆಯ ಹಲವರು ಅವರನ್ನು ಭೇಟಿ ಮಾಡಿದ ಆರೋಗ್ಯ ವಿಚಾರಿಸಿದ್ದಾರೆ.
ಈ ವೇಳೆ ಮಾತನಾಡಿದ ರವಿಕುಮಾರ ಚಾಮಲಾಪುರ, ಪ್ರಸ್ತುತ ಹಂತ ಹಂತವಾಗಿ ಗುಣಮುಖನಾಗುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದೇನೆ. ಈ ಸಂದರ್ಭದಲ್ಲಿ ನುರಿತ ವೈದ್ಯರು ಸಾಕಷ್ಟು ರೀತಿಯಲ್ಲಿ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಅದೇ ರೀತಿಯಲ್ಲಿ ನನ್ನೆಲ್ಲ ಆತ್ಮೀಯರು ಬಂಧುಗಳು, ಪದಾಧಿಕಾರಿಗಳು ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿಕೊಂಡು ಮಾನಸಿಕ ಸ್ಥೈರ್ಯ, ಧೈರ್ಯ ತುಂಬಿ ಹೋಗುತ್ತಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆೆ. ಸದ್ಯದಲ್ಲೇ ಗುಣಮುಖನಾಗಿ, ಆದಷ್ಟು ಬೇಗ ಮಂಡ್ಯಕ್ಕೆ ಬರುತ್ತೇನೆ. ತಮ್ಮೆಲ್ಲರ ಸಹಕಾರದಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಚಟುವಟಿಕೆಗಳನ್ನು ಎಲ್ಲರೂ ಜತೆಯಲ್ಲಿ ಸೇರಿ ಮಾಡೋಣ. ಎಲ್ಲರನ್ನೂ ಮನೆಗೆ ಹೋಗಿ ಕರೆದು ಸಂಭಾಳಿಸಿಕೊಂಡು ಸಾಹಿತ್ಯ ಚಟುವಟಿಕೆಗಳನ್ನು ಮಾಡಲು ನಾನು ತೀರ್ಮಾನ ಮಾಡಿದ್ದೇನೆ ಎಂದರು.
ಕರ್ನಾಟಕ ಸಂಘದ ಕಾರ್ಯದರ್ಶಿ ಚಂದಗಾಲು ಲೋಕೇಶ್, ಅರಕೆರೆ ಸಂತೋಷ್, ಎಲ್.ರಮೇಶ್, ಸ್ವರ್ಣಸಂದ್ರ ಕೃಷ್ಣ, ಗೊರವಾಲೆ ಚಂದ್ರಶೇಖರ್ ಇದ್ದರು.