ಜಿಲ್ಲೆ

ಸೊಳ್ಳೆ ಚಿಕ್ಕದಾದ್ರೂ ಕಾಟ ದೊಡ್ದು

ಸಿರಿಗೆರೆ: ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಡುವುದರಿಂದ ರೋಗ-ರುಜಿನಗಳಿಂದ ದೂರ ಇರಬಹುದು. ಸೊಳ್ಳೆ ಚಿಕ್ಕದು ಆದರೆ ಅದು ನೀಡುವ ಕಾಟ ಮಾತ್ರ ದೊಡ್ಡದು. ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಹೇಳಿದರು.

ಗ್ರಾಮದ ಲಕ್ಷ್ಮೀಸಾಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಸೊಳ್ಳೆ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೂರು ಬಗೆಯ ಸೊಳ್ಳೆಗಳಿಂದ ಮನುಷ್ಯನಿಗೆ ಅಪಾಯವಿದೆ.

ಅನಾಫಿಲಿಸ್‌ನಿಂದ ಮಲೇರಿಯಾ, ಈಡಿಸ್‌ನಿಂದ ಚಿಕನ್ ಗುನ್ಯಾ, ಡೆಂಘೀ ಜ್ವರ ಹಾಗೂ ಕ್ಯುಲೆಕ್ಸ್ ಸೊಳ್ಳೆ ಕಚ್ಚುವುದರಿಂದ ಮೆದುಳು ಜ್ವರ ಬರಲಿದೆ ಎಂದರು.

ಸೊಳ್ಳೆಗಳ ನಿರ್ಮೂಲನೆ ಆಗಬೇಕು. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಿ, ಘನ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು.

ಮಲಗುವಾಗ ಸೊಳ್ಳೆ ಪರದೆ ಬಳಸಿ, ಕಿಟಕಿಗಳಿಗೆ ಜಾಲರಿ ಅಳವಡಿಸಿಕೊಂಡು ಸೊಳ್ಳೆ ಕಡಿತದಿಂದ ಪಾರಾಗಿ ಎಂದು ಹೇಳಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ರೊನಾಲ್ಡರಾಸ್ ಎಂಬ ವಿಜ್ಞಾನಿ 1897ರ ಆ.20ರಂದು ಮನುಷ್ಯರಿಗೆ ಮಲೇರಿಯಾ ಹರಡಲು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಕಾರಣ ಎಂದು ಕಂಡುಹಿಡಿದರು.

ಅವರ ನೆನಪಿಗಾಗಿ ಜಗತ್ತಿನಾದ್ಯಾಂತ ಸೊಳ್ಳೆ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.

ಮನೆಯಲ್ಲಿನ ನೀರಿನ ತಾಣಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಮನೆಯ ಅಂಗಳದಲ್ಲಿ ಚೆಂಡು ಹೂವು, ಸೇವಂತಿಗೆ, ತುಳಸಿ ಗಿಡಗಳನ್ನು ಬೆಳೆಸಿ ಸೊಳ್ಳೆಗಳನ್ನ ನಿಯಂತ್ರಿಸಬೇಕು.

ನಿಂತ ನೀರಿಗೆ ನಿರುಪಯುಕ್ತ ಆಯಿಲ್ ಎರಚುವುದರ ಮುಖಾಂತರವೂ ಸೊಳ್ಳೆ ಉತ್ಪತ್ತಿ ತಡೆಯಬಹುದು. ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಬೇಕು ಎಂದು ತಿಳಿಸಿದರು.

ಪ್ರೌಢಶಾಲಾ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಚಂದ್ರಶೇಖರ್ ಇತರರಿದ್ದರು.