ಜಿಲ್ಲೆ

ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸೂಚನೆ

ಉಡುಪಿ: ಬೇಸಿಗೆ ಕಾಲದಲ್ಲಿ ಸಭೆ, ಸಮಾರಂಭ, ಜಾತ್ರೆ, ರಥೋತ್ಸವ, ಊರು ಹಬ್ಬ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಕಲುಷಿತ ನೀರು, ಕಲುಷಿತ ಆಹಾರ ಸೇವನೆಯಿಂದ ಕರುಳು ಬೇನೆ, ಕಾಲರಾ, ವಿಷಮಶೀತ ಜ್ವರ, ಕಾಮಾಲೆ ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಈ ಬಗ್ಗೆ ಜನರಿಗೆ ಮಾಹಿತಿ ನೀಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು.

ಮಂಗಳವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕೆ.ಪಿ.ಎಂ.ಇ. ಕಾಯ್ದೆಯಡಿ ಅನುಮತಿ ಪಡೆದ ಕ್ಲಿನಿಕ್​ಗಳು ಹಾಗೂ ಆರೋಗ್ಯ ಸಂಸ್ಥೆಗಳು ವೈದ್ಯಕಿಯ ವೆಚ್ಚದ ದರಪಟ್ಟಿಯನ್ನು ಪ್ರದರ್ಶಿಸುವುದು ಕಡ್ಡಾಯ. ದರಪಟ್ಟಿ ಇಲ್ಲದಿದ್ದರೆ ಮೊದಲ ಬಾರಿ ನೋಟೀಸ್​ ನೀಡಿ, ಮತ್ತೊಮ್ಮೆ ಪುನರಾವರ್ತಿಸಿದ್ದಲ್ಲಿ ಅಂತಹ ಆರೋಗ್ಯ ಸಂಸ್ಥೆ ಅಥವಾ ಕ್ಲಿನಿಕ್​ಗಳ ಪರವಾನಿಗೆಯನ್ನು ರದ್ದುಪಡಿಸಬೇಕು ಎಂದರು.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಈವರೆಗೆ 73 ಶಿಶು ಮರಣಗಳು ಉಂಟಾಗಿವೆ. ಜಿಲ್ಲೆಯಲ್ಲಿ ವೈದ್ಯಕಿಯ ಸೇವಾ ಸೌಲಭ್ಯ ಉತ್ತಮವಾಗಿದ್ದರೂ ಸಹ ಶಿಶು ಮರಣಗಳಾಗುತ್ತಿವೆ. ಈ ಬಗ್ಗೆ ಉನ್ನತ ಮಟ್ಟದ ವರದಿಯನ್ನು ಪಡೆದು ಶಿಶು ಮರಣದ ಸಂಖ್ಯೆಯನ್ನು ಕಡಿಮೆಗೊಳಿಸಲು ಮುಂದಾಗಬೇಕು. ಮಕ್ಕಳಿಗೆ ರೋಗ ನಿರೋಧಕ ಚುಚ್ಚು ಮದ್ದುಗಳನ್ನು ನೀಡುವ ಕಾರ್ಯಗಳು ಉತ್ತಮ ರೀತಿಯಲ್ಲಿ ಆಗಬೇಕು. ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ರಕ್ತನಿಧಿ ಕೇಂದ್ರಗಳಲ್ಲಿ ಜಿಲ್ಲೆಯಲ್ಲಿ ತುರ್ತು ರಕ್ತದ ಅವಶ್ಯಕತೆ ಅನುಗುಣವಾಗಿ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದರು.

ಮಂಗನ ಕಾಯಿಲೆ ಬಗ್ಗೆ ಜಾಗೃತಿ

ಸಾಮಾನ್ಯವಾಗಿ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚು ಉಷ್ಣಾಂಶ ವಾತಾವರಣ ಇರುವಂತಹ ಸಂದರ್ಭದಲ್ಲಿ ಕಂಡುಬರುತ್ತವೆ. ಕಾಡಂಚಿನಲ್ಲಿ ವಾಸಿಸುವ ಜನರಿಗೆ ಈ ಕಾಯಿಲೆ ಹರಡುವ ಬಗ್ಗೆ ಅರಿವು ಮೂಡಿಸಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಿ.ಡಿ.ಓ, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸಮನ್ವಯ ಸಮಿತಿಯ ಸಭೆಗಳನ್ನು ನಡೆಸಬೇಕು ಎಂದರು.

11 ಅಂಗಡಿ ಪರವಾನಿಗೆ ರದ್ದು

ತಂಬಾಕು ಉತ್ಪನ್ನಗಳು ಶಾಲಾ ಕಾಲೇಜುಗಳ 100 ಮೀಟರ್​ ವ್ಯಾಪ್ತಿಯಲ್ಲಿ ಮಾರಾಟ ಮಾಡುವುದು ರ್ನಿಬಂಧವಿದೆ. ಇವುಗಳನ್ನು ಉಲ್ಲಂಘನೆ ಮಾಡಿದ ಮಣಿಪಾಲದ ವ್ಯಾಪ್ತಿಯಲ್ಲಿ 11 ಅಂಗಡಿಗಳ ಪರವಾನಿಗೆಯನ್ನು ರದ್ದುಪಡಿಸಲಾಗಿದೆ. ಬೈಂದೂರು-&ಭಟ್ಕಳ ತಾಲೂಕಿನ ಗಡಿ ಭಾಗದ ಕೆಲವು ಪ್ರದೇಶಗಳಲ್ಲಿ ಕೋಟ್ಪಾ ಕಾಯಿದೆ ಉಲ್ಲಂಘನೆ ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ. ಇವುಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗಭೂಷಣ್​ ಉಡುಪ, ಜಿಲ್ಲಾ ಆರ್​.ಸಿ.ಎಚ್​ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀರಾಮರಾವ್​, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್​, ಡಿ.ಎಸ್​.ಓ ಡಾ. ನಾಗರತ್ನ, ಜಿಲ್ಲಾ ಏಡ್ಸ್​ ರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಸರ್ಜನ್​ ಡಾ. ಎಚ್​.ಅಶೋಕ್​, ಕೆ.ಎಂ.ಸಿ. ತಜ್ಞ ವೈದ್ಯರಾದ ಡಾ. ಲೆಸ್ಸಿ ಲೂಯಿಸ್​, ಡಾ. ಶಂಕರ ಬಕ್ಕಣ್ಣ, ಡಾ. ರಾಜೇಶ್ವರಿ, ಡಾ. ಯಶ್​ ಅಲೋಕ್​ ಮತ್ತಿತರರು ಉಪಸ್ಥಿತರಿದ್ದರು.