ಬೆಂಗಳೂರು: ಆರೋಗ್ಯ ಇಲಾಖೆಯು (2024-25ನೇ ಸಾಲಿಗೆ) ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೆ ಅನುಮತಿ ನೀಡಿದ್ದು, ಈ ಸಂಬಂಧ ಮಾರ್ಗಸೂಚಿ ಸಹಿತ ಸುತ್ತೋಲೆ ಹೊರಡಿಸಿದೆ. ಜುಲೈ ತಿಂಗಳ ಅಂತ್ಯ (31) ದೊಳಗೆ ಕೌನ್ಸಿಲಿಂಗ್ ಪೂರ್ಣಗೊಳಿಸಲು ಸೂಚನೆ ನೀಡಿದೆ.
2016ರ ಬಳಿಕ ವರ್ಗಾವಣೆಗೆ ಮುಂದಾಗಿರುವ ಆರೋಗ್ಯ ಇಲಾಖೆ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಕೌನ್ಸಿಂಗ್ ಮೂಲಕ ವರ್ಗಾವಣೆ ನಡೆಸಲಿದೆ. ಇದರೊಂದಿಗೆ ಕಳೆದ ಎಂಟು ವರ್ಷಗಳಿಂದ ವರ್ಗಾವಣೆಗೆ ಎದುರು ನೋಡುತ್ತಿದ್ದ ವೈದ್ಯರು ಹಾಗೂ ಸಿಬ್ಬಂದಿ ನಿರಾಳ ಗೊಂಡಂತಾಗಿದೆ.
ಇಲಾಖೆಯ ಗ್ರೂಪ್ ‘ಎ’ ಯಿಂದ ಹಿಡಿದು ಗ್ರೂಪ್ ‘ಡಿ’ವರೆಗಿನ ಎಲ್ಲ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಕೌನ್ಸಿಂಗ್ ಮೂಲಕವೇ ವರ್ಗಾವಣೆ ನಡೆಸಲಿದ್ದು, ಇಲಾಖೆಯಲ್ಲಿ ಗುರುತಿಸಿರುವ ತಜ್ಞ ಹುದ್ದೆಗಳಲ್ಲಿ ವೈದ್ಯರು ತಜ್ಞತೆಗೆ ಅನುಗುಣವಾಗಿ ಕಾರ್ಯನಿರ್ವಹಿಸದೇ ಬೇರೆ ತಜ್ಞತೆ/ ಇತರೆ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರ ಮಾಹಿತಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಮೂರು ವರ್ಷ ಸೇವಾವಧಿ ಪೂರೈಸಿರುವ ವೈದ್ಯರು, ನಾಲ್ಕು ವರ್ಷ ಪೂರೈಸಿರುವ ಗ್ರೂಪ್ ‘ಎ’ ನೌಕರರು, 5 ವರ್ಷ ಪೂರೈಸಿದ ಗ್ರೂಪ್ ‘ಸಿ’ ನೌಕರರು ಹಾಗೂ 7 ವರ್ಷ ಸೇವಾವಧಿ ಪೂರೈಸಿರುವ ಗ್ರೂಪ್ ‘ಡಿ’ ನೌಕರರು ಜೂನ್ ತಿಂಗಳ ಅಂತ್ಯದೊಳಗೆ ಮಾಹಿತಿ ಸಲ್ಲಿಸುವಂತೆ ತಿಳಿಸಲಾಗಿದೆ.