ಜಿಲ್ಲೆ

ಸರ್ಕಾರಿ ವೈದ್ಯರ ಕಳ್ಳಾಟ, 108 ಆಂಬ್ಯುಲೆನ್ಸ್ ವಾಹನಗಳ ಖಾಸಗಿ ನಿರ್ವಹಣೆಗೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಕ್ರಮ

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ವೈದ್ಯರು ಸಮವಸ್ತ್ರ ಧರಿಸುವುದು, ವಿಶೇಷ ಆ್ಯಪ್ ಮೂಲಕ ಫೇಸ್ ರೀಡಿಂಗ್ ಹಾಜರಾತಿ ಸೇರಿದಂತೆ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಗೈರು ತಡೆಯುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಚಿಂತಾಮಣಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಂಬ್ಯುಲೆನ್ಸ್ ವಾಹನಗಳ ಕೊರತೆಯನ್ನು ನೀಗಿಸಬೇಕಾಗಿದೆ. ಈ ನಿಟ್ಟಿನಲ್ಲಿ 108 ಕಮಾಂಡ್ ಕಂಟ್ರೋಲ್, ಗುತ್ತಿಗೆ ವ್ಯವಸ್ಥೆಯನ್ನು ಕೈ ಬಿಟ್ಟು ಸರ್ಕಾರವೇ ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದು ಪ್ರತಿ ಜಿಲ್ಲಾ ಮಟ್ಟದಲ್ಲಿ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಜಿವಿಕೆ ಖಾಸಗಿ ಸಂಸ್ಥೆಯನ್ನು ಹೊರಗೆ ಕಳುಹಿಸಲಾಗುತ್ತದೆ. ಈಗಾಗಲೇ ಚಾಮರಾಜನಗರದಲ್ಲಿ ಪ್ರಾಯೋಗಿಕ ಕೆಲಸ ನಡೆಯುತ್ತಿದೆ. ವಿಶೇಷ ಆ್ಯಪ್ ಮೂಲಕ ಪರಿಣಾಮಕಾರಿಯಾಗಿ ಸೇವೆ ಒದಗಿಸಲಾಗುತ್ತದೆ ಎಂದರು.

*ಪಕ್ಷದ ರೀತಿಯಲ್ಲಿ ವರ್ತನೆ
ರಾಜ್ಯದಲ್ಲಿ ಗುತ್ತಿಗೆದಾರರ ಸಂದಲ್ಲಿ ಏಕಪಯವಾಗಿ ಕಮೀಷನ್ ಆರೋಪಿಸಿ ಪತ್ರ ಬರೆದರೆ ಸರಿಯಲ್ಲ. ಟೀಕೆಯ ಹಿಂದೆ ಯಾವ ಹಿನ್ನೆಲೆ ಇದೆ ಎನ್ನುವುದು ಮುಖ್ಯ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಬೆಳಕಿಗೆ ಬರುತ್ತಿದ್ದಂತೆ ತಕ್ಷಣ ಕ್ರಮ ಕೈಗೊಳ್ಳಲಾಯಿತು. ಹಾಗೆಯೇ ವರ್ಗಾವಣೆ, ಗುತ್ತಿಗೆ, ಆಡಳಿತ ಸೇವೆಯಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಉತ್ತಮ ಆಡಳಿತ ನಡೆಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಬಿಜೆಪಿಯ ಜನಾಕ್ರೋಶ ಪ್ರತಿಭಟನೆಯು ಮೊದಲು ಕೇಂದ್ರ ಸರ್ಕಾರದ ವಿರುದ್ಧ ನಡೆಯಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆ ಇಳಿಕೆಯಾದರೂ ದರವನ್ನು ಹೆಚ್ಚಿಸಲಾಗುತ್ತದೆ. ಕೇಂದ್ರವು ಲಾಭವನ್ನು ಮಾಡಿಕೊಳ್ಳುವುದರಲ್ಲಿ ನಿರತರವಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾದಾಗ ದರ ಏರಿಸಲಾಗುತ್ತದೆ. ಆದರೆ, ಇಳಿಕೆಯಾದಾಗ ಮಾತ್ರ ಇಳಿಸುವುದಿಲ್ಲ. ಇದರಿಂದ ಜನರಿಗೆ ನೆರವು ಸಿಗುತ್ತಿಲ್ಲ ಎಂದು ತಿಳಿಸಿದರು.