ಬೆಂಗಳೂರು: ಔಷಧ, ವೈದ್ಯಕೀಯ ಉಪಕರಣಗಳ ಖರೀದಿಗೆ ಕರ್ನಾಟಕ ರಾಜ್ಯ ಔಷಧ ಸರಬರಾಜು ನಿಗಮ (ಕೆಎಸ್‌ಎಂಎಸ್‌ಸಿಎಲ್) ನಡೆಸುವ ಟೆಂಡರ್ ಪ್ರಕ್ರಿಯೆಯಲ್ಲಿ ಬಿಡ್ಡುದಾರರ ಸಂಸ್ಥೆ, ಘಟಕಗಳ ತಪಾಸಣೆಗೆ ವೈದ್ಯರು ಹಾಗೂ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಈ ತಂಡಕ್ಕೆ ಅಗತ್ಯವಿರುವ ಸಿಬ್ಬಂದಿಯನ್ನು ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆಹಾರ ಮತ್ತು ಔಷಧ ಆಡಳಿತ ಇಲಾಖೆಯಿಂದ ಒದಗಿಸಲಾಗಿದೆ. ಕೆಎಸ್‌ಎಂಎಸ್‌ಸಿಎಲ್ ಖರೀದಿಸಿ, ಪೂರೈಸುವ ಔಷಧ ಉಪಕರಣಗಳ ಗುಣಮಟ್ಟದ ಬಗ್ಗೆ, ಎನ್‌ಎಬಿಎಲ್ (ನ್ಯಾಷನಲ್ ಅಕ್ರಿಡಿಯೇಶನ್ ಬೋರ್ಡ್ ಫಾರ್ ಲ್ಯಾಬರೋಟರೀಸ್) ಪ್ರಯೋಗಾಲಯಗಳ ಉತ್ಪಾದನಾ ಘಟಕಗಳ ಮೌಲ್ಯಮಾಪನಕ್ಕೆ ಈ ತಂಡ ರಚಿಸಲಾಗಿದೆ ಎಂದು ತಿಳಿಸಲಾಗಿದೆ.
ಉಪಕರಣದ ಗುಣಮಟ್ಟ, ಸುರಕ್ಷತೆ, ಕಾರ್ಯಪದ್ಧತಿಯ ತಪಾಸಣೆ, ದಾಖಲೆಗಳ ಪರಿಶೀಲನೆ ಹಾಗೂ ತಪಾಸಣಾ ವರದಿ ಸಿದ್ಧಪಡಿಸಿ ಸಲ್ಲಿಸುವ ಜವಾಬ್ದಾರಿಯನ್ನು ತಂಡ ಹೊಂದಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಇ-ಔಷಧ ವೇದಿಕೆಯಲ್ಲಿ ಗುಣಮಟ್ಟದ ಬಗ್ಗೆ ನೋಂದಾಯಿಸಿದ ನಂತರ ಎಚ್ಚರಿಕೆ ನೀಡಿದ ಬಳಿಕ ಅಗತ್ಯವಿದ್ದಲ್ಲಿ ಮಾತ್ರ ಆಸ್ಪತ್ರೆಗೆ ಸಂಬಂಧಪಟ್ಟ ಔಷಧ ಹಾಗೂ ಉಪಭೋಗ್ಯ ವಸ್ತುಗಳ ಸ್ಥಳೀಯ ಸಂಗ್ರಹಣೆಗೆ ಅನುಮತಿ ನೀಡಿದ್ದು, ಸರಿಯಾದ ರೀತಿಯ ಪರಿಶೀಲನೆ ನಂತರವಷ್ಟೇ ದೃಢೀಕರಿಸುವ ಇಲ್ಲವೆ ತಿರಸ್ಕರಿಸುವವರೆಗೆ ಔಷಧ ವಿತರಣೆ ಆಗದಂತೆ ಕೆಎಸ್‌ಎಂಎಸ್‌ಸಿಎಲ್ ಖಚಿತಪಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.