ಜಿಲ್ಲೆ

ವೈದ್ಯರ ಮೇಲಿನ ದೌರ್ಜನ್ಯ ತಡೆಗೆ ಸಮಿತಿ

ಬೆಂಗಳೂರು: ಕರ್ತವ್ಯನಿರತ ಮಹಿಳಾ ವೈದ್ಯಾಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ದೌರ್ಜನ್ಯ ತಡೆಗೆ ಮುಂಜಾಗ್ರತೆ ಕೈಗೊಳ್ಳಲು ರಾಜ್ಯ ಸರ್ಕಾರ ಆರೋಗ್ಯ ಇಲಾಖೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರನ್ನು ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇಲಾಖೆ ವೈದ್ಯಕೀಯ ಜಂಟಿ ನಿರ್ದೇಶಕರು, ಆರೋಗ್ಯ ಮತ್ತು ಯೋಜನೆ -1ರ ಉಪ ನಿರ್ದೇಶಕರು, ಮಾನಸಿಕ ಆರೋಗ್ಯ ವಿಭಾಗದ ಉಪ ನಿರ್ದೇಶಕರು, ವೈದ್ಯಕೀಯ ಉಪನಿರ್ದೇಶಕರು ಹಾಗೂ ಕೆಜಿಎಂಒಎ ಅಧ್ಯಕ್ಷರು, ಬಳ್ಳಾರಿ ಜಿಲ್ಲಾ ಶಸಚಿಕಿತ್ಸಕರು, ಆನೇಕಲ್ ವೈದ್ಯಾಧಿಕಾರಿ (ಆಡಳಿತ) ಯನ್ನು ಸದಸ್ಯರನ್ನಾಗಿ, ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ಹಾಗೂ ಓರ್ವ ನ್ಯಾಯವಾದಿ ಹಾಗೂ ಓರ್ವ ಮಹಿಳಾ ಪೊಲೀಸ್ ಅಧಿಕಾರಿಯನ್ನು ವಿಶೇಷ ಆಹ್ವಾನಿತರನ್ನಾಗಿ ನೇಮಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.