ಜಿಲ್ಲೆ

ಸೇವಾನಿರತ ವೈದ್ಯಾಧಿಕಾರಿಗಳ ಉನ್ನತ ವ್ಯಾಸಂಗಕ್ಕೆ ಮಾರ್ಗಸೂಚಿ - ಆರೋಗ್ಯ ಇಲಾಖೆ ಆದೇಶ

ಪಂಕಜ ಕೆ.ಎಂ.

ಬೆಂಗಳೂರು: ಸೇವಾನಿರತ ವೈದ್ಯಾಧಿಕಾರಿಗಳಿಗೆ ಉನ್ನತ ವ್ಯಾಸಂಗ ಮತ್ತು ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಿಗೆ ಸೇವಾನಿರತ ಕೋಟಾ ಅಥವಾ ನಿಯೋಜನೆ ಮೂಲಕ ಅವಕಾಶ ಮಾಡಿಕೊಡುವ ವೇಳೆ ಸಾಕಷ್ಟು ಲೋಪಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅರ್ಹತಾ ಮಾನದಂಡ ಹಾಗೂ ಮಾರ್ಗಸೂಚಿ ರಚಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಸ್ನಾತಕೋತ್ತರ ಅಥವಾ ಸೂಪರ್ ಸ್ಪೆಷಾಲಿಟಿ ಕೋರ್ಸ್ ವ್ಯಾಸಂಗ ಮಾಡಲು ಇಚ್ಛಿಸುವವರು ಎರಡು ವರ್ಷಗಳ ಕಾಯಂಪೂರ್ವ ಸೇವೆ ಹಾಗೂ ಐದು ವರ್ಷಗಳ ನಿಯಮಿತ ಸೇವೆ ಸೇರಿ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳನ್ವಯ ಕನಿಷ್ಠ 7 ವರ್ಷ ಸೇವೆ ಪೂರ್ಣಗೊಳಿಸಿರಬೇಕು. ಜತೆಗೆ ಸಾಮಾನ್ಯ ಕರ್ತವ್ಯ ವೈದ್ಯಾಕಾರಿಗಳಾಗಿ (ಜಿಡಿಎಂಒ) ನೇಮಕಗೊಂಡ ವೈದ್ಯಾಕಾರಿಗಳು ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 6 ವರ್ಷಗಳ ಸೇವೆ ಪೂರ್ಣಗೊಳಿಸಿದ ನಂತರವೇ ಕೋಟಾ ಅಥವಾ ನಿಯೋಜನೆಯಡಿ ಉನ್ನತ ವ್ಯಾಸಂಗಕ್ಕೆ ಅರ್ಹರಾಗಿರುತ್ತಾರೆ ಎಂಬ ನಿಯಮವಿದೆ.

ಆದರೆ, ಈ ನಿಯಮಗಳನ್ನು ಸೂಕ್ತವಾಗಿ ಪಾಲಿಸುತ್ತಿಲ್ಲ. ಸೇವಾನಿರತ ವೈದ್ಯಾಧಿಕಾರಿಗಳು ಅಗತ್ಯವಿಲ್ಲದ ವೈದ್ಯಕೀಯ ವಿಭಾಗಕ್ಕೆ ನಿಯೋಜನೆ ಕೋರುತ್ತಿದ್ದಾರೆ. ಇದರಿಂದ ತೀವ್ರ ಸಮಸ್ಯೆ ಉಂಟಾಗುತ್ತಿದ್ದು, ಗ್ರಾಮೀಣ ಪ್ರದೇಶದ ಆರೋಗ್ಯ ಸೇವೆಯಲ್ಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಸಮರ್ಪಕ ನಿಯೋಜನಾ ನೀತಿ ರೂಪಿಸಿರುವುದಾಗಿ ಆರೋಗ್ಯ ಇಲಾಖೆ ಸಮರ್ಥನೆ ನೀಡಿದೆ.

ಕಟ್ಟುನಿಟ್ಟಿನ ನಿಯಮ:

ಸೇವಾನಿರತ ಕೋಟಾದಡಿ ಉನ್ನತ ವ್ಯಾಸಂಗಕ್ಕೆ ಅನುಮತಿ ಪಡೆದ ವೈದ್ಯರುಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ವ್ಯಾಸಂಗ ಮಾಡುತ್ತಾರೆ. ಇಂತಹ ಪ್ರಕರಣಗಳಲ್ಲಿ ವೈದ್ಯಾಧಿಕಾರಿಯು ಯಾವುದೇ ನಿಯೋಜನಾ ಸೌಲಭ್ಯ, ವೇತನ ಮತ್ತು ವೇತನ ಸಹಿತ ವ್ಯಾಸಂಗ ರಜೆಗೆ ಅರ್ಹರಾಗುವುದಿಲ್ಲ. ವೇತನರಹಿತ ರಜೆ ಅಥವಾ ಇತರ ಯಾವುದೇ ಅರ್ಹ ರಜೆಯನ್ನು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯೊಂದಿಗೆ ಪಡೆಯತಕ್ಕದ್ದು ಎಂದು ಸ್ಪಷ್ಟಪಡಿಸಲಾಗಿದೆ. ಜತೆಗೆ ಸೇವಾನಿರತ ಕೋಟಾದಡಿ ಸ್ನಾತಕೋತ್ತರ ಶಿಕ್ಷಣ ಸೇರುವವರು, ಕನಿಷ್ಠ ಹತ್ತು ವರ್ಷಗಳ ಅವಧಿಗೆ ಅಥವಾ ವಯೋ ನಿವೃತ್ತಿ ದಿನಾಂಕದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಸರ್ಕಾರದಲ್ಲಿ ಸೇವೆ ಸಲ್ಲಿಸುವುದಾಗಿ ಬಾಂಡ್ ಬರೆದು ಕೊಡಬೇಕು. ಈ ಅವಧಿಯಲ್ಲಿ ಅಧ್ಯಯನಕ್ಕಾಗಿ ನಿಯೋಜಿಸಲಾದ ಅದೇ ಕ್ಲಿನಿಕಲ್ ವಿಭಾಗದಲ್ಲಿ ಕಡ್ಡಾಯವಾಗಿ ನಿಯೋಜನೆಗೊಳ್ಳಬೇಕು. ಜತೆಗೆ ಯಾವುದೇ ಆಡಳಿತಾತ್ಮಕ ಹುದ್ದೆಗೆ ಅಥವಾ ಅವರ ಅರ್ಹತೆಯಲ್ಲದ (ಬೇರೆ ತಜ್ಞತೆ) ಯಾವುದೇ ಹುದ್ದೆಗೆ ನಿಯೋಜಿಸಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.