ವಿಜಯಪುರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಿಇಒ ರಿಷಿ ಆನಂದ ಭೇಟಿ ನೀಡಿ ಪರಿಶೀಲಿಸಿದರು. ವಿಜಯಕುಮಾರ ಆಜೂರ, ಸಿ.ಬಿ. ದೇವರಮನಿ ಮತ್ತಿತರರಿದ್ದಾರೆ.  
ಜಿಲ್ಲೆ

ಆರ್‌ಡಿಪಿಆರ್ ಇಲಾಖಾಧಿಕಾರಿಗಳ ಆರೋಗ್ಯ ತಪಾಸಣೆ

ವಿಜಯಪುರ: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿಗಾಗಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಜಿಪಂ ಸಿಇಒ ರಿಷಿ ಆನಂದ ಚಾಲನೆ ನೀಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿ, ಸಿಬ್ಬಂದಿ ಗ್ರಾಮೀಣರಿಗೆ ಸೇವೆ ಸಲ್ಲಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು, ಕರ್ತವ್ಯದೊಂದಿಗೆ ವೈಯಕ್ತಿಕ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನಂತರ, ಸಿಇಒ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕುಂದು ಕೊರತೆ ಸಭೆ ಜರುಗಿತು. ಈ ಸಭೆಯಲ್ಲಿ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಮಸ್ಯೆಗಳನ್ನು ಆಲಿಸಿದರು.

ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಮತ್ತಿತರರಿದ್ದರು.