ಜಿಲ್ಲೆ

ಪೌಷ್ಟಿಕಾಂಶದ ಕೊರತೆಯಿಂದ ಮಹಿಳೆಯರಿಗೆ ಹೆಚ್ಚು ರಕ್ತಹೀನತೆ: ಮಿಮ್ಸ್ ಸ್ತ್ರೀರೋಗ ತಜ್ಞ ಡಾ.ಎಸ್.ಯೋಗೇಂದ್ರಕುಮಾರ್ ಹೇಳಿಕೆ

ಮಂಡ್ಯ: ಪೌಷ್ಟಿಕಾಂಶವುಳ್ಳ ಆಹಾರದ ಸೇವನೆ ಮಾಡದ ಪರಿಣಾಮ ಮಹಿಳೆಯರು ಹೆಚ್ಚು ರಕ್ತಹೀನತೆಗೆ ಒಳಗಾಗುತ್ತಿದ್ದಾರೆಂದು ಮಿಮ್ಸ್ ಸ್ತ್ರೀರೋಗ ತಜ್ಞ ಡಾ.ಎಸ್.ಯೋಗೇಂದ್ರಕುಮಾರ್ ಹೇಳಿದರು.

ತಾಲೂಕಿನ ಬಿ.ಹೊಸೂರು ಕಾಲನಿಯಲ್ಲಿ ಕೃಷಿಕ ಲಯನ್ಸ್ ಸಂಸ್ಥೆ ಮಂಡ್ಯ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳೆಯರಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಾಗೂ ತಪಾಸಣಾ ಶಿಬಿರ, ಔಷಧ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರು ಹೆಚ್ಚು ರಕ್ತ ಹೀನತೆ ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಪೌಷ್ಟಿಕಾಂಶದ ಆಹಾರ ಸೇವನೆ ಜತೆಗೆ ಆರೋಗ್ಯದ ಕಡೆಗೆ ಗಮನ ಕೊಡಬೇಕೆಂದು ಸಲಹೆ ನೀಡಿದರು.

ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಈ ರೀತಿಯ ಆರೋಗ್ಯ ಶಿಬಿರಗಳನ್ನು ಗ್ರಾಮೀಣ ಭಾಗದ ಜನರು ಸದುಪಯೋಗಪಡಿಸಿಕೊಳ್ಳಬೇಕು. ಇತ್ತೀಚಿಗೆ ಮಹಿಳೆಯರಲ್ಲಿ ಹೃದಯಾಘಾತ, ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮುಂತಾದ ಕಾಯಿಲೆಗಳು ಹೆಚ್ಚಾಗುತ್ತಿದೆ. ಆದ್ದರಿಂದ ಮಹಿಳೆಯರು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕಡೆಗೂ ಹೆಚ್ಚು ಗಮನ ಕೊಡಬೇಕೆಂದು ಕಿವಿಮಾತು ಹೇಳಿದರು.

ಅಕ್ಕಮಹಾದೇವಿ ಮಹಿಳಾ ವಿವಿಯ ವಿಶೇಷಾಧಿಕಾರಿ ಎಸ್.ಕಿರಣ್ ನಾಗಪ್ಪ, ಎನ್‌ಎಸ್‌ಎಸ್ ಅಧಿಕಾರಿ ಡಾ.ಗೀತಾಮಣಿ, ಪ್ರೊ.ಡೇವಿಡ್ ಇತರರಿದ್ದರು. ಶಿಬಿರದಲ್ಲಿ 43 ಜನ ಮಹಿಳೆಯರ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಸಲಹೆ, ಚಿಕಿತ್ಸೆ ಮತ್ತು ಔಷಧ ವಿತರಣೆ ಮಾಡಲಾಯಿತು.